ಗುಜರಾತ್ ಗಲಭೆ: ಮೋದಿ ಕಟ್ಟಾ ಬೆಂಬಲಿಗ ಕೊಡ್ನಾನಿಗೆ ಜಾಮೀನು

ಬುಧವಾರ, 30 ಜುಲೈ 2014 (20:32 IST)
2002ರ ಗುಜರಾತ್ ಕೋಮು ಗಲಭೆ ಪ್ರಕರಣವೊಂದರ ಸಂಬಂಧ 28 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಂಡ್ನಾನಿ ಅವರಿಗೆ  ಜಾಮೀನು ಸಿಕ್ಕಿದೆ.
 
ಅಹಮದಾಬಾದ್‌ನ ಕಾರಾಗೃಹದಲ್ಲಿ ಮಾಯಾ ಕೊಡ್ನಾನಿ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಗುಜರಾತ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
 
ಹೃದಯಕ್ಕೆ ಸಂಬಂಧಪಟ್ಟ ಕಾಹಿಲೆಯಿಂದ ಬಳಲುತ್ತಿರುವ ಮಾಯಾ ಅವರು, ಚಿಕಿತ್ಸೆ ಪಡೆಯಲು 6 ತಿಂಗಳು ಜಾಮೀನು ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಜಾಮೀನು ನೀಡುವುದನ್ನು ವಿರೋಧಿಸಿದ್ದ ವಿಶೇಷ ತನಿಖಾ ತಂಡ, ಮಾಯಾ ಅವರಿಗೆ ಜೈಲಿನಲ್ಲೇ ಚಿಕಿತ್ಸೆಯನ್ನು ಕೊಡಿಸಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
 
ವಾದ ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಕಳೆದ ನವೆಂಬರ್ ತಿಂಗಳಲ್ಲಿ ಮಾಯಾ ಅವರಿಗೆ 3 ತಿಂಗಳ ಕಾಲ ಷರತ್ತು ಬದ್ಧ ಜಾಮೀನು ನೀಡಿತ್ತು.
 
ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರು ತಪ್ಪಿತಸ್ಥರ ಪಟ್ಟಿಯಲ್ಲಿದ್ದು, ಸದ್ಯಕ್ಕೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2002ರಲ್ಲಿ ನರೋಡಾ ಪಾಟಿಯಾ ಗಲಭೆಯಲ್ಲಿ 97 ಜನರು ಸಾವನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ