ಹಾರ್ದಿಕ್ ಪಟೇಲ್ ಕುರಿತ ಪ್ರಶ್ನೆ ಕೇಳಿದ್ದಕ್ಕೆ ಶಿಕ್ಷಕಿ ವಜಾ

ಶನಿವಾರ, 10 ಅಕ್ಟೋಬರ್ 2015 (12:39 IST)
ಪಟೇಲ್ ಮೀಸಲಾತಿ ಹೋರಾಟವನ್ನು ಹುಟ್ಟು ಹಾಕಿ ದೇಶಾದ್ಯಂತ ಸುದ್ದಿ ಮಾಡಿ, ಗುಜರಾತ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಬೆಚ್ಚಿ ಬೀಳಿಸಿರುವ 22ರ ಹರೆಯದ ಯುವಕ ಹಾರ್ದಿಕ್ ಪಟೇಲ್ ಬಗ್ಗೆ  8ನೇ ತರಗತಿಯ ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಫಲವಾಗಿ ಶಿಕ್ಷಕಿಯೊಬ್ಬಳು ತನ್ನ ಕೆಲಸದಿಂದ ವಜಾಗೊಂಡಿದ್ದಾಳೆ. 

ಮೂಲಗಳ ಪ್ರಕಾರ ರಾಜಕೋಟ್‌ನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ರಶ್ನಿಕಾಂತ ಮೋದಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಲೀನಾ ವಚ್ನಾನಿ (28) 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಸಾಮನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ, ''ಪಟೇಲ್ ಸಮುದಾಯ ಯಾಕಾಗಿ ಹೋರಾಟ ಮಾಡುತ್ತಿದೆ?  ಹೋರಾಟದ ನಾಯಕ ಯಾರು? ಇತ್ತೀಚೆಗಾಗಿ ಮೀಸಲಾತಿಗಾಗಿ ರಾಜಕೋಟ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನ  ಹೆಸರೇನು?'' ಎಂಬಿತ್ಯಾದಿ ಪ್ರಶ್ನೆಗಳನ್ನು ಸೆಟ್‌ ಮಾಡಿದ್ದಾರೆ. 
 
ಶಿಕ್ಷಕಿ ಈ ಬಗೆಯ ಪ್ರಶ್ನೆಗಳನ್ನು ಸೆಟ್ ಮಾಡಿರುವುದು ಗುಜರಾತ್‌ನಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಅಸಮಾಧಾನ ತಂದಿದ್ದು, ಶಾಲಾ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ. ಶಿಕ್ಷಕಿ ಕ್ಷಮೆ ಕೇಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
 
ಶಿಕ್ಷಕಿ ಲೀನಾ ವಚ್ನಾನಿ ಸಹ ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು ಉದ್ದೇಶ ಪೂರ್ವಕವಾಗಿಯೇ ಈ ಪ್ರಶ್ನೆಗಳನ್ನು ಸೇರಿಸಿದ್ದರು ಎಂದು ಹೇಳಲಾಗುತ್ತಿದೆ.
 
ಉಮೇಶ್ ಪಟೇಲ್ ಎಂಬ 30 ವರ್ಷದ ಯುವಕ ತಮ್ಮ ಸಮುದಾಯದ ಮೀಸಲಾತಿ ಬೇಡಿಕೆ,ಉದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಉದಾಸೀನ ತೋರುತ್ತಿದೆ ಎಂದು ಡೆತ್ ನೋಟ‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ವೆಬ್ದುನಿಯಾವನ್ನು ಓದಿ