ಗುರುದಾಸಪುರ ದಾಳಿ: ಉಗ್ರರು ಬಂದಿದ್ದು ಪಾಕ್‌ನಿಂದ

ಬುಧವಾರ, 29 ಜುಲೈ 2015 (17:10 IST)
ಪಂಜಾಬ್‌ನ  ಗುರುದಾಸಪುರ ಜಿಲ್ಲೆಯ ದೀನಾನಗರದಲ್ಲಿ ದಾಳಿ ನಡೆಸಿದ್ದ  ಮೂವರು ಶಂಕಿತ ಉಗ್ರರು ಪಾಕಿಸ್ತಾನದಿಂದ ಬಂದಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

 ಜುಲೈ 26-27ರ ರಾತ್ರಿ ರಾವಿ ನದಿ ದಾಟಿ ಉಗ್ರರು ಭಾರತವನ್ನು ಪ್ರವೇಶಿಸಿದ್ದರು ಎಂದು ತಿಳಿದು ಬಂದಿದ್ದು ಅವರು ಅನೇಕ ಪ್ರದೇಶಗಳಲ್ಲಿ ದಾಳಿ ನಡೆಸುವ ಯೋಜನೆಯನ್ನು ಹೊಂದಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಸೇನಾ ಸಮವಸ್ತ್ರದಲ್ಲಿದ್ದ ಭಾರೀ  ಶಸ್ತ್ರಸಜ್ಜಿತ ಮೂವರು ಉಗ್ರರು ಸೋಮವಾರ ಬೆಳಗಿನ ಜಾವ 4.55ರ ಸುಮಾರಿಗೆ ರಸ್ತೆಯಲ್ಲಿ ಓಡಾಡುತ್ತಿದ್ದ ದೃಶ್ಯಗಳು ಸಹ ಪೊಲೀಸರಿಗೆ ಸಿಕ್ಕಿವೆ.
 
ಮೃತ ಭಯೋತ್ಪಾದಕರು ಇಟ್ಟುಕೊಂಡಿದ್ದ 2 ಜಿಪಿಎಸ್‌ ಮಶಿನ್‌ನ್ನು ವಶಪಡಿಸಿಕೊಂಡ ಪೊಲೀಸರಿಗೆ ಜುಲೈ 21 ರಂದು ಈ ಯಂತ್ರದಲ್ಲಿ ಸಾಗಬೇಕಾದ ದಾರಿ, ಗುರಿಗಳ ವಿವರಗಳನ್ನು ನಮೂದಿಸಿರುವುದು ಗೊತ್ತಾಗಿದೆ.
 
"ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್)ನಿಂದ ಸಂಗ್ರಹಿಸಿರುವ ಡೇಟಾ ಪ್ರಕಾರ ಮೂವರು ಭಯೋತ್ಪಾದಕರು, ಭಾನುವಾರ ಮತ್ತು ಸೋಮವಾರದ ನಡುವಿನ ರಾತ್ರಿ ಪಾಕಿಸ್ತಾನದ ಶಕರ್ಗಢದ ಘಾರೋಟ್‌ನಿಂದ ಅಂತರಾಷ್ಟ್ರೀಯ ಗಡಿಯಾದ ಪಠಾನ್ಕೋಟ್‌ನ ಬಮಿಯಾಲ್ ನಗರದ ಮೂಲಕ ಭಾರತಕ್ಕೆ ನುಸುಳಿದ್ದರು ಎಂದು ಮೂಲಗಳು ತಿಳಿಸಿವೆ. 
 
ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ  ಅಷ್ಟೊಂದು ಪರಿಣಾಮಕಾರಿಯಾಗಿಲ್ಲವಾದ್ದರಿಂದ ಸುಲಭವಾಗಿ ಉಗ್ರರು ಅಮೃತಸರ್- ಜಮ್ಮ ಹೆದ್ದಾರಿಯತ್ತ ನಡೆದು ಬಂದರು ಎಂದು ಮಾಹಿತಿ ಲಭಿಸಿದೆ.

ವೆಬ್ದುನಿಯಾವನ್ನು ಓದಿ