ಉಗ್ರರ ಎನ್‌ಕೌಂಟರ್ ಖತಂ: ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನಾಪಡೆ

ಸೋಮವಾರ, 27 ಜುಲೈ 2015 (18:09 IST)
ಪಂಜಾಬ್‌ನ ಗುರುದಾಸ್‌ಪುರ್ ಜಿಲ್ಲೆಯ ದೀನಾನಗರ್ ಪಟ್ಟಣದಲ್ಲಿ ಉಗ್ರರ ವಿರುದ್ಧದ ಎನ್‌ಕೌಂಟರ್ ಅಂತ್ಯಗೊಂಡಿದ್ದು ಎಲ್ಲಾ ಉಗ್ರರನ್ನು ಹೊಡೆದುರಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
 ಸೇನಾ ಸಮವಸ್ತ್ರ ಧರಿಸಿ ಗುರುದಾಸಪುರದಿಂದ ಜಮ್ಮುವಿನ ಕಡೆಗ ಹೊರಟಿದ್ದ ಬಸ್ ಒಳಕ್ಕೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದರು. ಪರಿಣಾಮ ಮೂವರು ಪ್ರಯಾಣಿಕರು ಮೃತಪಟ್ಟು ಉಳಿದ ನಾಲ್ವರು ಗಾಯಗೊಂಡಿದ್ದಾರೆ.
 
ನಂತರ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ ಆತ ಕಾರ್‌ನ್ನು ಎಗರಿಸಿಕೊಂಡು ಹೊರಟ ಉಗ್ರರು ದೀನಾನಗರ್ ಪೊಲೀಸ್ ಠಾಣೆಯೊಳಕ್ಕೆ ನುಗ್ಗಿ ಫೈರಿಂಗ್ ಆರಂಭಿಸಿದ್ದರು. ಪೊಲೀಸರ ಕುಟುಂಬದ ಸದಸ್ಯರನ್ನು ಒತ್ತೆಯಾಳಾಗಿಕೊಂಡು ದಾಳಿಯನ್ನು ಮುಂದುವರೆಸಿದ್ದರು. 
 
ಉಗ್ರರು ದೀನಾನಗರ್ ಪೊಲೀಸ್ ಠಾಣೆಯೊಳಗಿನಿಂದ ಮನಬಂದಂತೆ ಗುಂಡುಹಾರಿಸಿದ ಪರಿಣಾಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾವನ್ನಪ್ಪಿದ್ದರು. ನಂತರ ಸೇನಾಪಡೆಗಳು ಹಾಗೂ ಎನ್‌ಎಸ್‌ಜಿ ಕಮಾಂಡೋ ಪಡೆಗಳು ಸ್ಥಳಕ್ಕೆ ಧಾವಿಸಿ ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ.
 
ಉಗ್ರರು ಲಷ್ಕರ್-ಎ-ತೊಯಿಬಾ ಅಥವಾ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿರಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆ ನೀಡಿದೆ.
 
ಉಗ್ರರ ದಾಳಿಯಲ್ಲಿ ಐವರು ಪೊಲೀಸರು, ಮೂವರು ನಾಗರಿಕರು, ಮೂವರು ಉಗ್ರರು ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಉಗ್ರರು ಬಸ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕನಿಗೆ ಗೌರವಿಸಲು ಪಂಜಾಬ್ ಸರಕಾರ ನಿರ್ಧರಿಸಿದೆ.   

ವೆಬ್ದುನಿಯಾವನ್ನು ಓದಿ