ಪಠಾನ್‌ಕೋಟ್‌ನಂತಹ ಮತ್ತಷ್ಟು ಭಯೋತ್ಪಾದನೆ ದಾಳಿಗಳು ನಡೆಯಲಿವೆ; ಹಫೀಜ್ ಸಯೀದ್

ಗುರುವಾರ, 4 ಫೆಬ್ರವರಿ 2016 (16:12 IST)
ಪಠಾನ್‌ಕೋಟ್ ಮೇಲೆ ನಡೆದ ಉಗ್ರರ ದಾಳಿಯಂತೆ ಬಾರತದಲ್ಲಿ ಅನೇಕ ದಾಳಿಗಳು ನಡೆಯಲಿವೆ ಎಂದು 2008ರ ಮುಂಬೈ ಉಗ್ರ ದಾಳಿಯ ರೂವಾರಿ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಎಚ್ಚರಿಕೆ ನೀಡಿದ್ದಾರೆ.
 
ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಯೀದ್, 8 ಲಕ್ಷ ಭಾರತೀಯ ಸೇನೆ ಕಾಶ್ಮಿರಿ ಜನತೆಯ ಮೇಲೆ ದೌರ್ಜನ್ಯ ಎಸಗುತ್ತಿದೆ. ದೌರ್ಜನ್ಯಕ್ಕೊಳಗಾದವರಿಗೆ ಪಠಾನ್‌ಕೋಟ್ ದಾಳಿಯ ರೀತಿಯಲ್ಲಿ ದಾಳಿ ನಡೆಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
 
ಪಠಾನ್‌ಕೋಟ್ ದಾಳಿಯ ಹೊಣೆ ಹೊತ್ತ ಯುನೈಟೆಡ್ ಜಿಹಾದಿ ಕೌನ್ಸಿಲ್ ಮುಖ್ಯಸ್ಥ ಸಯೀದ್ ಸಲಾಹುದ್ದೀನ್‌ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ನೀವು ಕೇವಲ ಒಂದು ಪಠಾನ್‌ಕೋಟ್ ದಾಳಿಯನ್ನು ನೋಡಿದ್ದೀರಿ. ಮುಂಬರುವ ದಿನಗಳಲ್ಲಿ ಕಾದು ನೋಡಿ ಏನಾಗುತ್ತದೆ ಎಂದು ಗುಡುಗಿದ್ದಾನೆ. 
 
ಕಾಶ್ಮಿರವನ್ನು ಸ್ವತಂತ್ರಗೊಳಿಸುವವರೆಗೆ ಯುದ್ಧ ಮುಂದುವರಿಯಲಿದೆ. ಜಿಹಾದ್‌ಗಾಗಿ ನಾವು ಸಿದ್ದರಿದ್ದೇವೆ. ಭಾರತದ ಮುಂದಿನ ಭವಿಷ್ಯ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಹೇಳಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅಕಸ್ಮಿಕವಾಗಿ ಲಾಹೋರ್‌ಗೆ ಭೇಟಿ ನೀಡಿದ ಒಂದು ವಾರದ ನಂತರ ಪಠಾನ್‌ಕೋಟ್ ವಾಯುನೆಲೆಯಲ್ಲಿ ಉಗ್ರರ ದಾಳಿ ನಡೆದಿರುವುದನ್ನು ಸ್ಮರಿಸಬಹುದು. 

ವೆಬ್ದುನಿಯಾವನ್ನು ಓದಿ