ಹಜ್ ದುರಂತ: ಮೃತ ಭಾರತೀಯರ ಸಂಖ್ಯೆ 101 ಕ್ಕೆ ಏರಿಕೆ

ಶುಕ್ರವಾರ, 9 ಅಕ್ಟೋಬರ್ 2015 (13:48 IST)
ಸೌದಿ ಅರೇಬಿಯದಲ್ಲಿ ಹಜ್‌ ಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಭಾರತೀಯರ ಸಂಖ್ಯೆ 101ಕ್ಕೇರಿದ್ದು, 32 ಜನ ಇನ್ನೂ ನಾಪತ್ತೆಯಾಗಿಯೇ ಉಳಿದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, 'ಸೌಧಿ ಅಧಿಕಾರಿಗಳು ನೀಡಿರುವ ಸದ್ಯದ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ 101 ಜನ ಭಾರತೀಯರು ದುರ್ಮರಣವನ್ನಪ್ಪಿದ್ದು, ಕಾಣೆಯಾಗಿದ್ದ 32 ಜನ ಪತ್ತೆಯಾಗಿಲ್ಲ' ಎಂದು ಸ್ಪಷ್ಟ ಪಡಿಸಿದ್ದಾರೆ. ನಾಪತ್ತೆಯಾಗಿರುವ ಭಾರತೀಯರ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ
 
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7 ಕಿ.ಮೀ. ದೂರವಿರುವ ಮೀನಾದಲ್ಲಿ ಹಜ್ ಯಾತ್ರೆಯ ಅಂತಿಮ ಆಚರಣೆಯಾದ ಸೈತಾನನಿಗೆ ಕಲ್ಲು ಹೊಡೆಯುವ ಪ್ರಕ್ರಿಯೆ ವೇಳೆ ನೂಕುನುಗ್ಗಲು ನಡೆದು ಈ ಘಟನೆ ಸಂಭವಿಸಿತ್ತು. ಇದು ಹಜ್‍ನ ಇತಿಹಾಸದಲ್ಲೇ ನಡೆದ ಎರಡನೇ ಅತಿ ಭೀಕರ ದುರಂತವಾಗಿದೆ. 1990ರಲ್ಲಿ ನಡೆದ ಕಾಲ್ತುಳಿತಕ್ಕೆ 1,426 ಮಂದಿ  ಮೃತಪಟ್ಟಿದ್ದರು. ಕಳೆದ ತಿಂಗಳ ಆರಂಭದಲ್ಲಿ ಬೃಹತ್ ಕ್ರೇನ್ ವೊಂದು ಮೆಕ್ಕಾ ಮಸೀದಿ ಮೇಲೆ ಕುಸಿದು ಬಿದ್ದು 107 ಮಂದಿ ಸಾವಿಗೀಡಾಗಿದ್ದರು.

ವೆಬ್ದುನಿಯಾವನ್ನು ಓದಿ