ಧೀರ ಯೋಧನ ನಿಧನಕ್ಕೆ ಮೋದಿ ಸೇರಿದಂತೆ ಗಣ್ಯರ ಸಂತಾಪ

ಗುರುವಾರ, 11 ಫೆಬ್ರವರಿ 2016 (15:05 IST)
ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರ ನಿಧನಕ್ಕೆ ರಾಷ್ಟ್ರ- ರಾಜ್ಯದ ಗಣ್ಯರು ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
 
ಹನುಮಂತಪ್ಪ ನಮ್ಮನ್ನು ನೋವಿನ ಕಡಲಲ್ಲಿ ಬಿಟ್ಟು ಹೋಗಿದ್ದಾರೆ. ನಿಮ್ಮಲ್ಲಿದ್ದ ಯೋಧನಿಗೆ ಸಾವಿಲ್ಲ. ನಿಮ್ಮಂತಹ ವೀರ ಸೈನಿಕ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ.  ದೇಶಕ್ಕಾಗಿ ನೀವು ಸೇವೆ ಸಲ್ಲಿಸಿದ್ದ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದಾರೆ. 
 
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಹನುಮಂತಪ್ಪ ಸಾವಿಗೆ ತೀವ್ರ ಅಘಾತ ವ್ಯಕ್ತಪಡಿಸಿದ್ದು, ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. 
 
ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ನಿಮಿಷ ಮೌನಾಚರಣೆ ನಡೆಸಿ ಯೋಧನಿಗೆ ಗೌರವ ಸಲ್ಲಿಸಿದರು.
 
ಯೋಧನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಅವರ ಕುಟುಂಬಕ್ಕೆ ಆಸರೆಯನ್ನು ನೀಡುವ ಎಲ್ಲ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ನಾಯ್ಕ ಭರವಸೆ ನೀಡಿದ್ದಾರೆ.
 
ಅವರ ಆತ್ಮಕ್ಕೆ ಭಗವಂತ ಶಾಂತಿ ದಯಪಾಲಿಸಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮೃತ ಯೋಧನ ಕುಟುಂಬಕ್ಕೆ ಸಕಲ ರೀತಿಯ ನೆರವು ನೀಡಲಿ ಎಂದರು. ವೈಯಕ್ತಿಕವಾಗಿ ನಾನು ಹನುಮಂತಪ್ಪ ಕುಟುಂಬಕ್ಕೆ ಸಹಾಯ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಭರವಸೆ ನೀಡಿದ್ದಾರೆ.
 
ಧಾರವಾಡ ಜಿಲ್ಲಾ ಉಸ್ತುವಾರಿ ಸಟಿವ ವಿನಯ್ ಕುಲಕರ್ಣಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್‍. ಡಿ. ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಅನೇಕ ಗಣ್ಯರು ಯೋಧನ ಆತ್ಮಕ್ಕೆ ಶಾಂತಿ ಕೋರಿ, ಸಂತಾಪ ಸೂಚಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ