ನಿರಾಳರಾದ ರಾಧೆ ಮಾ: ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

ಗುರುವಾರ, 8 ಅಕ್ಟೋಬರ್ 2015 (13:54 IST)
ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ಬಂಧನದ ಭೀತಿ ಎದುರಿಸುತ್ತಿದ್ದ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾಗೆ ಬಾಂಬೆ ಹೈಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ನೀಡಿದ್ದು, ಅವರೀಗ ಕೊಂಚ ನಿರಾಳರಾಗಿದ್ದಾರೆ. 

ವರದಕ್ಷಿಣೆ ಕಿರುಕುಳಕ್ಕೆ ಕುಮ್ಮಕ್ಕು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ರಾಧೆ ಮಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇವತಿ ಮೋಹಿತ್ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದ್ದಾರೆ. 
 
ಆಗಸ್ಟ್ 13 ರಂದು ಸೆಷನ್ಸ್ ಕೋರ್ಟ್ ರಾಧೆ ಮಾ ಅವರ ಜಾಮೀನು ಅರ್ಜಿಯನ್ನು ಕಡೆಗಣಿಸಿತ್ತು. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 
 
ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಅವರ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರಲ್ಲದೇ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅವರು ನೀಡುತ್ತಿರುವ ವರದಕ್ಷಿಣೆ ಕಿರುಕುಳಕ್ಕೆ ರಾಧೆ ಮಾ ಅವರು ನೀಡುತ್ತಿರುವ ಕುಮ್ಮಕ್ಕೇ ಕಾರಣ ಎಂದು ಮಹಿಳೆಯೊಬ್ಬರು ಮುಂಬೈನ ಬೊರಿವಲಿ ಕ್ಷೇತ್ರದ ಠಾಣೆಯಲ್ಲಿ ರಾಧೆ ಮಾ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದರು.
 
ಆ ಬಳಿಕ ನಟಿ ಡಾಲಿ ಬಿಂದ್ರಾ ಅವರು ಸಹ ರಾಧೆ ಮಾ ತಮ್ಮ ಭಕ್ತರ ಜತೆ ಲೈಂಗಿಕ ಸಂಪರ್ಕ ನಡೆಸುವಂತೆ ಒತ್ತಾಯ ಹೇರಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. 

ವೆಬ್ದುನಿಯಾವನ್ನು ಓದಿ