ಅಮೆರಿಕದಲ್ಲಿ 16 ಬಾರಿ ಬಟ್ಟೆ ಬದಲಾಯಿಸಿದ ಮೋದಿ: ರಾಹುಲ್ ಗಾಂಧಿ ಗೇಲಿ

ಬುಧವಾರ, 7 ಅಕ್ಟೋಬರ್ 2015 (21:03 IST)
ಬಡ ರೈತರ ಸಂಕಷ್ಟ ನಿವಾರಣೆಗಿಂತ ವಿದೇಶಿ ಪ್ರವಾಸಗಳು ಮತ್ತು ಉಡುಪುಗಳ ಪ್ರದರ್ಶನದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಹೆಚ್ಚು ಕಾಳಜಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ಮಾಡಿದ್ದಾರೆ. 
 
ಮೋದಿಜಿ ಅಮೆರಿಕಕ್ಕೆ ಹೋದಾಗ,  16 ಬಾರಿ ಉಡುಪು ಬದಲಾಯಿಸುವುದನ್ನು ಕಾಣುತ್ತೀರಿ. ಮೊದಲಿಗೆ ಅವರು  ಒಂದು ಬಣ್ಣದ ಉಡುಪು, ಬಳಿಕ ಹಳದಿ ವರ್ಣದ ಉಡುಪು, ಅದಾದ ಬಳಿಕ ಹಸಿರು, ನಂತರ ನೀಲಿ, ನಂತರ ನಸುಗೆಂಪು ಬದಲಿಸುತ್ತಲೇ ಇರುತ್ತಾರೆ. ನೀವು ನಿತೀಶ್‌‍ಜಿ ಅವರು ಬಿಳಿಯ ಬಣ್ಣ ಬಿಟ್ಟರೆ ಬೇರೆ ಬಣ್ಣದ ಉಡುಪಿನಲ್ಲಿ ಕಂಡಿದ್ದೀರಾ ಎಂದು ರಾಹುಲ್ ಪ್ರಶ್ನಿಸಿದರು.  ಬಿಹಾರದ ಶೀಖಾಪುರದಲ್ಲಿ ಚುನಾವಣೆ ರಾಲಿಯನ್ನು ಉದ್ದೇಶಿಸಿ ರಾಹುಲ್ ಮಾತನಾಡುತ್ತಿದ್ದರು.
 
ಮೋದಿ ಪ್ರಧಾನಿಯಾದಾಗ ನಾನು ಸೂಟ್ ಬೂಟ್ ಸರ್ಕಾರ ಎಂದು ಕರೆದಿದ್ದೆ. ಅದಾದ ಬಳಿಕ ಅವರು ಸೂಟ್ ಧರಿಸುವುದನ್ನೇ ಬಿಟ್ಟಿದ್ದಾರೆ ಎಂದು ರಾಹುಲ್ ಗೇಲಿ ಮಾಡಿದರು. 
ಅಮೆರಿಕ ಭೇಟಿಯ ಚಿತ್ರಗಳ ಬಗ್ಗೆ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ಮಾಡಿದ ರಾಹುಲ್, ರೈತರಿಗಿಂತ  ಹೆಚ್ಚಾಗಿ ಮೋದಿಜಿಗೆ ಉದ್ಯಮಿಗಳೇ ಮಹತ್ವ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

 ಅಮೆರಿಕಾದ ಅನೇಕ ಮಂದಿಯನ್ನು ಚಿತ್ರಗಳಲ್ಲಿ ಕಾಣಬಹುದು. ಫೇಸ್‌ಬುಕ್‌ನ ಕೆಲವರು, ಇನ್‌ಸ್ಟಾಗ್ರಾಂನ ಕೆಲವು ಜನ, ಗೂಗಲ್, ಯೂಟ್ಯೂಬ್ ಜನರೇ ಚಿತ್ರದಲ್ಲಿ ತುಂಬಿರುತ್ತಾರೆ. ಆದರೆ ಮೋದಿಜಿ ಅವರ ಚಿತ್ರಗಳಲ್ಲಿ ಭಾರತದ ರೈತ, ಭಾರತದ ಕಾರ್ಮಿಕ ಅಥವಾ ಭಾರತದ ಬಡವ ಯಾವತ್ತೂ ಕಂಡಿಲ್ಲ ಎಂದು ರಾಹುಲ್ ವ್ಯಂಗ್ಯವಾಡಿದರು. 
 
 

ವೆಬ್ದುನಿಯಾವನ್ನು ಓದಿ