ಮೋದಿಗೆ ಯು-ಟರ್ನ್ ಹೊಡೆದ ತರೂರ್: ಸ್ವಚ್ಚತಾ ಅಭಿಯಾನ ಮೋದಿಯದ್ದಲ್ಲ, ಗಾಂಧಿಜೀಯವರದ್ದು

ಭಾನುವಾರ, 26 ಅಕ್ಟೋಬರ್ 2014 (10:50 IST)
ಸ್ವಚ್ಛ ಭಾರತ ಕಲ್ಪನೆ ಮಹಾತ್ಮ ಗಾಂಧಿಜೀಯದ್ದೇ ವಿನಃ ಪ್ರಧಾನಿ ನರೇಂದ್ರ ಮೋದಿ ಅವರದಲ್ಲ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಹೇಳಿದ್ದಾರೆ.
 
ಕೇರಳದ ತಮ್ಮ ಸ್ವಕ್ಷೇತ್ರ ತಿರುವನಂತರಪುರದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಶಶಿತರೂರ್ ಅವರು, ಗಾಂಧೀಜಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲರು ಭಾರತ ದೇಶದ ಶ್ರೇಷ್ಠ ನಾಯಕರಾಗಿದ್ದು, ಅವರನ್ನು ನರೇಂದ್ರ ಮೋದಿ ಅವರಿಗೆ ಶರಣಾಗತಿ ಮಾಡುವುದಿಲ್ಲ. ಸ್ವಚ್ಛ ಭಾರತ ಎಂಬ ಪರಿಕಲ್ಪನೆಯನ್ನು ಯಾವುದೇ ಒಂದು ರಾಜಕೀಯ ಪಕ್ಷ ತನ್ನ ಹಿತಾಸಕ್ತಿಗೆ ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ. ಸ್ವಚ್ಛತೆ ಎಂಬುವುದು ದೇಶದ ಪ್ರತಿಯೊಬ್ಬ ನಾಗರೀಕನ ಬದ್ಧತೆಯಾಗಿರಬೇಕು ಎಂದು ತರೂರ್ ಹೇಳಿದರು.
 
ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಕುರಿತು ಮಾತನಾಡಿದ ತರೂರ್ ಅವರು, ಸ್ವಚ್ಛ ಭಾರತ ಎಂಬ ಪರಿಕಲ್ಪನೆಯನ್ನು ಹೊರತಂದಿದ್ದೇ ಮಹಾತ್ಮ ಗಾಂಧೀಜಿ ಅವರು. ಕಾಂಗ್ರೆಸ್ ಪಕ್ಷ ಕೂಡ ಮೊದಲಿನಿಂದಲೂ ಸ್ವಚ್ಛಭಾರತ ಪರಿಕಲ್ಪನೆಗೆ ಒತ್ತು ನೀಡಿತ್ತು ಎಂದು ಹೇಳಿದ್ದಾರೆ.
 
ಇದೇ ವೇಳೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಟ್ವೀಟ್ ಮಾಡಿರುವ ತರೂರ್ ಅವರು, ನಾನು ಸದಾ ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತೇನೆ. ಆದರೆ ಗಾಂಧೀಜಿ ಅವರ ಸ್ವಚ್ಛ ಭಾರತ ಪರಿಕಲ್ಪನೆ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗ ಬಾರದು ಎಂದು ಹೇಳಿದ್ದಾರೆ.
 
ಈ ಹಿಂದೆ ಕಳೆದ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಸ್ವಚ್ಛ ಭಾರತ ಅಭಿಯಾನದ ವೇಳೆ, ಸಚಿನ್ ತೆಂಡೂಲ್ಕರ್, ಪ್ರಿಯಾಂಕ ಚೋಪ್ರಾ ಮತ್ತು ಕಾಂಗ್ರೆಸ್ ನಾಯಕ ಶಶಿತರೂರ್ ಅವರು ಸೇರಿದಂತೆ ಒಟ್ಟು 9 ಮಂದಿ ಗಣ್ಯರನ್ನು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು. ಬಳಿಕ ಇದಕ್ಕೆ ಉತ್ತರಿಸಿದ್ದ ಶಶಿ ತರೂರ್ ಅವರು ಪರೋಕ್ಷವಾಗಿ ನರೇಂದ್ರ ಮೋದಿ ಅವರ ಸ್ವಚ್ಛಭಾರತ ಅಭಿಯಾನದ ಪರವಾಗಿ ಮಾತುಗಳನ್ನಾಡಿದ್ದರು.
 
ಇದು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಇರುಸು-ಮುರುಸು ಉಂಟುಮಾಡಿದ್ದು, ಶಶಿತರೂರ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಬಳಿಕ ನಡೆದ ಪಕ್ಷದ ಸಭೆಯಲ್ಲಿ ಶಶಿ ತರೂರ್ ಅವರನ್ನು ಕಾಂಗ್ರೆಸ್ ವಕ್ತಾರ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಸಂಬಂಧಿಸಿದ ವೀಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ
 

ವೆಬ್ದುನಿಯಾವನ್ನು ಓದಿ