ಬಿಜೆಪಿ ಪಕ್ಷದೊಂದಿಗೆ ಯಾವತ್ತೂ ಮೈತ್ರಿಯಿಲ್ಲ: ಒಮರ್ ಅಬ್ದುಲ್ಲಾ ಘೋಷಣೆ

ಗುರುವಾರ, 3 ಮಾರ್ಚ್ 2016 (17:26 IST)
ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ನ್ಯಾಷನಲ್ ಕಾನ್ಫ್‌ರೆನ್ಸ್ ಪಕ್ಷ ಮೈತ್ರಿ ಹೊಂದುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆ ನೀಡಿದ್ದರಿಂದ ಹಲವು ಉಹಾಪೋಹ ವರದಿಗಳಿಗೆ ತೆರೆ ಬಿದ್ದಂತಾಗಿದೆ. 
 
ಪಿಡಿಪಿ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟ ಜಮ್ಮು ಕಾಶ್ಮಿರದಲ್ಲಿ ಸರಕಾರ ರಚಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಸಂದರ್ಭದಲ್ಲಿ, ರಾಜ್ಯದ ಘನತೆ ಮತ್ತು ಗೌರವ  ಹಾಗೂ ಜನತೆಯ ಭಾವನೆಗಳ ವಿರುದ್ಧವಾಗಿ ಹೋಗುವ ಬದಲಿಗೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದು ಸೂಕ್ತ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.
 
ಕಾಶ್ಮಿರದ ಶೋಪಿಯಾನ್ ಪ್ರದೇಶದಲ್ಲಿ ಪಕ್ಷದ ಪರವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓಮರ್ ಅಬ್ದುಲ್ಲಾ, ಪಿಡಿಪಿ ಪಕ್ಷ,  ನಮ್ಮ ಧ್ವಜ ಮತ್ತು ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ನಾಶಗೊಳಿಸುವ ಹಾಗೂ ಯಾವ ಆಹಾರ ಸೇವಿಸಬೇಕು ಅಥವಾ ಯಾವ ಆಹಾರ ಸೇವಿಸಬಾರದು ಎನ್ನುವಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. 
 
ಕೇವಲ ಅಧಿಕಾರಕ್ಕಾಗಿ ಪಿಡಿಪಿ ಪಕ್ಷ ರಾಜ್ಯದ ಜನತೆಯ ಆಶೋತ್ತರಗಳನ್ನು ಬದಿಗೊತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರುಗಳು ನಿರಂತರವಾಗಿ ಅಲ್ಪಸಂಖ್ಯಾತರಿಗೆ ಬೆದರಿಕೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ