ಗಾಂಧಿಯವರ ಪುಣ್ಯತಿಥಿಯಂದು ಸಿಹಿ ಹಂಚಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ ಹಿಂದೂ ಮಹಾಸಭಾ ಬೆಂಬಲಿಗರು

ಶನಿವಾರ, 30 ಜನವರಿ 2016 (20:00 IST)
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 68ನೇ ಪುಣ್ಯತಿಥಿಯನ್ನು ದೇಶಾದ್ಯಂತ ಆಚರಿಸುತ್ತಿರುವ ಸಂದರ್ಭದಲ್ಲಿ ಹಿಂದು ಮಹಾಸಭಾದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಲ್ಲದೇ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ ಹೇಯ ಘಟನೆ ವರದಿಯಾಗಿದೆ.  
 
ಮೀರತ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯ ಮುಂದೆ ಬೆಂಬಲಿಗರು ಸಿಹಿ ಹಂಚಿ, ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
 
ಹಿಂದೂ ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಶರ್ಮಾ ಮಾತನಾಡಿ, ಗಾಂಧಿ ಸಾವನ್ನಪ್ಪಿದ ದಿನ ಹಿಂದುತ್ವ ಕಾರ್ಯಕರ್ತರಿಗೆ ಹಬ್ಬದ ದಿನದಂತೆ ಎಂದು ಹೇಳಿರುವುದು ಆಘಾತ ಮೂಡಿಸಿದೆ.
 
ಮಹಾತ್ಮಾ ಗಾಂಧಿಯ ಹಂತಕ ನಾಥುರಾಮ್ ಗೋಡ್ಸೆ ಹೀರೋ ಮತ್ತು ಹುತಾತ್ಮ ಎಂದು ಬಣ್ಣಿಸಿದ ಅವರು, ಗಾಂಧಿಯ ದೇಶವನ್ನು ವಿಭಜಿಸುವಂತಹ ಕೃತ್ಯವನ್ನು ತಡೆದು ಭಾರತವನ್ನು ಉಳಿಸಿದ ಮಹಾನ್ ವ್ಯಕ್ತಿ ಎಂದು ವರ್ಣಿಸಿದ್ದಾರೆ. 
 
1948ರ ಜನೆವರಿ 30 ರಂದು ನಾಥುರಾಮ್ ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದಂತಹ ಸುದಿನ. ಗೋಡ್ಸೆ ದೇಶ ಕಂಡ ಹೀರೋ. ಪ್ರತಿ ವರ್ಷ ಇಂದಿನ ದಿನದಂದು ಸಿಹಿ ಹಂಚಿ ಸಂಭ್ರಮಿಸುವುದಲ್ಲದೇ ನೃತ್ಯ ಕೂಡಾ ಮಾಡಿ ಗಾಂಧಿ ಹತ್ಯೆಗೆ ಸಂತಸ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.  
 
ಜಾತ್ಯಾತೀತ ಸಂವಿಧಾನದ ಬಗ್ಗೆ ನಮಗೆ ನಂಬಿಕೆಯಿಲ್ಲ. ಭಾರತವನ್ನು ಯಾವತ್ತೂ ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುತ್ತದೆಯೋ ಅದೇ ದಿನದಂದು ಗೋಡ್ಸೆಯವರನ್ನು ಹೀರೋ ಎಂದು ಘೋಷಿಸಲಾಗುವುದು. ಗಾಂಧಿ ಹತ್ಯೆಯಾದ ದಿನದಂದು ರಾಷ್ಟ್ರೀಯ ಹಬ್ಬವಾಗಿ ಘೋಷಿಸಲಾಗುವುದು ಎಂದು ಹಿಂದು ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಶರ್ಮಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ