ವಿಶ್ವದ ಎಲ್ಲ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲಿ ಪರಿಹಾರವಿದೆ: ಅಮಿತ್

ಸೋಮವಾರ, 29 ಜೂನ್ 2015 (15:45 IST)
ವಿಶ್ವದ ಎಲ್ಲ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ .

ಗುಜರಾತ್ ವಿಶ್ವವಿದ್ಯಾಲಯದಲ್ಲಿ ನಡೆದ, ಮಾಜಿ ರಾಷ್ಟ್ರಪತಿ ಕಲಾಂ ಅವರು ಬರೆದಿರುವ 'ಟ್ರಾನ್ಸೆಂಡೆನ್ಸ್: ಮೈ ಸ್ಪಿರಿಚ್ವಲ್ ಎಕ್ಸಪಿರಿಯೆನ್ಸ್ ವಿದ್ ಪ್ರಮುಖ್ ಸ್ವಾಮೀಜಿ' ಎಂಬ ಪುಸ್ತಕದ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶಾ, ಹಿಂದೂ ಧರ್ಮದಲ್ಲಿ ವಿಶ್ವ ಎದುರಿಸುತ್ತಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವಿದೆ. ಈ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ನಾನಿದನ್ನು ಹೇಳುತ್ತಿಲ್ಲ ಎಂದು ಹೇಳಿದರು. 
 
"ನಾನು ಎರಡು ವರ್ಷಗಳ ಕಾಲ ಸತತ ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ ಭಾರತದಲ್ಲಿರುವ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ದೇಶದಲ್ಲಿರುವ ಎಲ್ಲ ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳನ್ನು ಸಂದರ್ಶಿಸಿ ಆರ್ಶೀರ್ವಾದ ಪಡೆದಿದ್ದೆ. ಆದರೆ ಸೋಮನಾಥಕ್ಕೆ ಮಾತ್ರ ಭೇಟಿ ನೀಡಿರಲಿಲ್ಲ", ಎಂದು ಶಾ ಹೇಳಿದರು. ಸೊಹ್ರಾಬುದ್ದೀನ್ ಶೇಕ್ ಪ್ರಕರಣದ ಕಾನೂನು ವಿಚಾರಣೆ ವೇಳೆ ಗುಜರಾತ್ ಪ್ರವಾಸಕ್ಕೆ ತಮಗೆ ನಿರ್ಬಂಧ ಹೇರಿದ್ದನ್ನು ಉಲ್ಲೇಖಿಸಿ ಶಾ ಈ ಮಾತುಗಳನ್ನಾಡಿದ್ದಾರೆ. 
 
"ಆ ಕಠಿಣ ಸಂದರ್ಭದಲ್ಲಿ ನಾನು ನನ್ನ ಚಟುವಟಿಕೆಗಳನ್ನು ಮಾಡಲು ಕೂಡ ಶಕ್ತನಾಗಿರಲಿಲ್ಲ. ಆದರೆ ದೇವರ ಆಶೀರ್ವಾದದಿಂದ ನಾನು ಮೇಲೆದ್ದು ಬಂದೆ", ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ