ಹಿಂದುತ್ವವೆಂದರೆ ಧರ್ಮವಲ್ಲ, ಅದು ಜೀವನಮಾರ್ಗ: ಕೆನಡಾದಲ್ಲಿ ಮೋದಿ

ಶುಕ್ರವಾರ, 17 ಏಪ್ರಿಲ್ 2015 (13:10 IST)
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂಜಾನೆ ಕೆನಡಾದ ವ್ಯಾಂಕೋವರ್‌ನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆನಡಿಯನ್ ಪ್ರಧಾನಿ ಸ್ಟೀಪನ್ ಹಾರ್ಪರ್ ಕೂಡ ಅವರ ಜತೆಯಲ್ಲಿದ್ದರು. 

ಆ ಸಂದರ್ಭದಲ್ಲಿ ಕೆನಡಾದಲ್ಲಿ ವಾಸವಾಗಿರುವ ಆನಿವಾಸಿ ಭಾರತೀಯರ ಜತೆ ಸ್ವಲ್ಪ ಸಮಯ ಕಳೆದ ಮೋದಿ "ಹಿಂದುತ್ವ ಎಂಬುದು ಧರ್ಮವಲ್ಲ, ಅದು ಜೀವನದ ಮಾರ್ಗ. ಇದನ್ನು ಸುಪ್ರೀಂಕೋರ್ಟ್ ಕೂಡ ಘೋಷಿಸಿದೆ", ಎಂದರು.
 
ವಿಶ್ವಸಂಸ್ಥೆ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದ್ದು ಆ ದಿನವನ್ನಾಚರಿಸಲು ಭಾರತೀಯ ಮೂಲದ ಕೆನಡಿಯನ್ನರಿಗೆ ಮೋದಿ ಮನವಿ ಮಾಡಿದರು. ಭಾರತೀಯ ಸಮುದಾಯದವರು ಯೋಗವನ್ನು ಬೆಳೆಸಬೇಕಿದೆ. "ಪರಿಪೂರ್ಣ ಜೀವನ ನಡೆಸಲು ಯೋಗದ ಪಾತ್ರ ಅತಿ ಮಹತ್ವದ್ದು. ಈ ಹಿನ್ನೆಲೆಯಲ್ಲಿ ಯೋಗ ದಿನವನ್ನು ಆಚರಿಸಿ", ಎಂದು ಪ್ರಧಾನಿ ತಿಳಿಸಿದರು. 
 
ದೇವಸ್ಥಾನಕ್ಕೆ ಭೇಟಿಯಾಗುವ ಮೊದಲು ಕನಿಷ್ಕ ಬಾಂಬ್ ದಾಳಿಯಲ್ಲಿ ಮಡಿದವರ ನೆನಪಿಗೆ ನಿರ್ಮಿಸಲಾಗಿರುವ ಏರ್ ಇಂಡಿಯಾ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿ ಸಿಖ್ ಗುರುದ್ವಾರಕ್ಕೆ ಕೂಡ ಭೇಟಿ ನೀಡಿದ್ದರು. ಗುರುದ್ವಾರದಲ್ಲಿ ಮಾತನಾಡಿದ ಅವರು " ಕೆನಡಾದಲ್ಲಿ ವ್ಯಾಪಕ ಸಂಖ್ಯೆಯಲ್ಲಿರುವ ಸಿಖ್ ಸಮುದಾಯದವರು ತಮ್ಮ ಕೆಲಸ, ನಡವಳಿಕೆಗಳ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ, ಸಿಖ್ಖರು ತ್ಯಾಗಕ್ಕೆ ಹೆಸರಾದವರು ",ಎಂದು ಕೊಂಡಾಡಿದರು.
 
ಪ್ರಧಾನಿಯವರ ಮೂರು ದಿನಗಳ ಕೆನಡಾ ಪ್ರವಾಸ ಇಂದಿಗೆ ಮುಕ್ತಾಯವಾಗಿದ್ದು, ಅವರಿಂದು ಭಾರತಕ್ಕೆ ಮರಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ