ಸಲ್ಮಾನ್‌ ಖಾನ್ ನಿರಾಳ: ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದ ಕೋರ್ಟ್

ಬುಧವಾರ, 6 ಮೇ 2015 (16:54 IST)
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪರವಾಗಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಇಲ್ಲಿನ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ. 
 
ನ್ಯಾಯಾಮೂರ್ತಿ ಅಭಯ್ ತಿಪ್ಸೆ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಜಾಮೀನು ನೀಡಿದೆ.  
 
ಪ್ರಕರಣದಲ್ಲಿ ಇಂದು 5 ವರ್ಷ ಜೈಲು ಶಿಕ್ಷೆಯಾದ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತುಕೊಂಡ ಸಲ್ಮಾನ್ ಪರ ವಕೀಲರು, ಸಲ್ಮಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದೇ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕೆಂದು ಕೋರಿ ಜಾಮೀನು ಮತ್ತು ಮೇಲ್ಮನವಿ ಅರ್ಜಿಯನ್ನು ಇಂದು ಮಧ್ಯಾಹ್ನ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಯಿತು.  
 
ಇಂದು ನಡೆಯುತ್ತಿರುವ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸಲ್ಮಾನ್ ಅವರ ಪರವಾಗಿ ಮತ್ತೋರ್ವ ವಕೀಲ ಹರೀಶ್ ಸಾಳ್ವೆ ಅವರು ವಾದ ಮಂಡಿಸುತ್ತಿದ್ದಾರೆ. ಈ ವೇಳೆ ಸಲ್ಮಾನ್ ಸಹೋದರಿ ಅಲ್ವಿರಾ ಅವರು ಹಾಜರಿದ್ದು, ವಿಚಾರಣೆಯನ್ನು ವೀಕ್ಷಿಸುತ್ತಿದ್ದಾರೆ. 
 
ಪ್ರಕರಣದ ಹಿನ್ನೆಲೆ: ಕುಡಿದು ಇಲ್ಲಿನ ಬಾಂದ್ರಾ ಪ್ರದೇಶದಲ್ಲಿ ಚಾಲನೆ ಮಾಡುತ್ತಿದ್ದಾಗ ಸಲ್ಮಾನ್ ಅವರ ಕಾರು ಕಾಲು ದಾರಿಯಲ್ಲಿ ಮಲಗಿದ್ದ ಪಾದಚಾರಿಗಳ ಮೇಲೆ ಹತ್ತಿತ್ತು. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು. ಈ ಘಟನೆಯು ಕಳೆದ 2002ರ ಸೆ. 27 ಮತ್ತು 28ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಆದ್ದರಿಂದ ಭಾರತೀಯ ದಂಡ ಸಂಹಿತೆ 304/2ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಪ್ರಕರಣವನ್ನು  ಉದ್ದೇಶ ರಹಿತ ಮಾನವ ಹತ್ಯೆ ಎಂದು ಪರಿಗಣಿಸಿ ಇಂದು ಶಿಕ್ಷೆ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಜೈಲುಪಾಲಾಗಿದ್ದ ಸಲ್ಮಾನ್ ಪೊಲೀಸರ ವಶದಲ್ಲಿದ್ದರು. ಬಳಿಕ ಜಾಮೀನು ಅರ್ಜಿ ಸಲ್ಲಿಸಿದ್ದ ಸಲ್ಲು ಪರ ವಕೀಲರು 2 ದಿನಗಳ ಮಟ್ಟಿಗೆ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದಾರೆ.  

ವೆಬ್ದುನಿಯಾವನ್ನು ಓದಿ