ಹಿಟ್ ಅಂಡ್ ರನ್ ಪ್ರಕರಣ: ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬುಧವಾರ, 6 ಮೇ 2015 (13:20 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧ ಇದ್ದ ಹಿಟ್ ಅಂಡ್ ರನ್ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು ಇಲ್ಲಿನ ಸೆಷನ್ಸ್ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ನ್ಯಾಯಾಲಯದ ನ್ಯಾಯಾಮೂರ್ತಿ ದೇಶಪಾಂಡೆ ಅವರಿದ್ದ ಏಕ ಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿತ್ತು. ಮೊದಲ ಹಂತವಾಗಿ ದೋಷಿ ಎಂಬುದಾಗಿ ಘೋಷಿಸಿದ್ದ ನ್ಯಾಯಾಲಯ, ಇಂದು ಮಧ್ಯಾಹ್ನ ಶಿಕ್ಷೆಯನ್ನು ಪ್ರಕಟಿಸಿದೆ.  
 
ವಿಚಾರಣೆ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣದ ಬಗ್ಗೆ ತಮ್ಮ ಅನಿಸಿಕೆ ಏನು, ಏಕೆಂದರೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಪ್ರಕಟಿಸುವ ನಿಯಮವಿದೆ ಎಂದು ಸಲ್ಮಾನ್ ಅವರನ್ನೇ ಪ್ರಶ್ನಿಸಿದ್ದರು. ಅದಕ್ಕೆ ಸಲ್ಮಾನ್ ಖಾನ್ ಮೌನ ವಹಿಸಿದ್ದರು ಎಂದು ತಿಳಿದು ಬಂದಿದೆ.  
 
ಸಲ್ಮಾನ್ ಮುಂದಿನ ನಡೆ ಏನು?
ಕೆಳ ಹಂತದ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಮುಂಬೈ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದು, ಜಾಮೀನು ಅರ್ಜಿಯನ್ನೂ ಕೂಡ ಸಲ್ಲಿಸಲಿದ್ದಾರೆ ಎನ್ನಲಾಗಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಮೇಲಿದ್ದ ಆರೋಪಗಳೇನು?
-ಉದ್ದೇಶ ರಹಿತ ಮಾನವ ಹತ್ಯೆ ಆರೋಪ 
-ನಿರ್ಲಕ್ಷ್ಯ ಚಾಲನೆಯಿಂದ ವ್ಯಕ್ತಿ ಸಾವಿನ ಆರೋಪ
-ಅಸುರಕ್ಷಿತ ಚಾಲನೆಯಿಂದ ಸಾರ್ವಜನಿಕರನ್ನು ಗಾಯಗೊಳಿಸಿದ ಆರೋಪ 
-ಅಸುರಕ್ಷಿತ ಚಾಲನೆಯಿಂದ ಸ್ವತ್ತುಗಳಿಗೆ ಹಾನಿ ಮಾಡಿದ ಆರೋಪ
-ಪರವಾನಿಗೆ ಇಲ್ಲದೆ ಕಾರು ಚಾಲನೆ ಮಾಡಿದ ಆರೋಪ
-ಕುಡಿದು ಕಾರು ಚಾಲನೆ ಮಾಡಿದ ಆರೋಪ
 
ಭಾರತೀಯ ದಂಡ ಸಂಹಿತೆ 304/2ರ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಆದ್ದರಿಂದ ಈ ಪ್ರಕರಣವನ್ನು ಉದ್ದೇಶ ರಹಿತ ಮಾನವ ಹತ್ಯೆ ಪ್ರಕರಣ ಎಂದು ಪರಿಗಣಿಸಿ ಶಿಕ್ಷೆ ಪ್ರಕಟಿಸಲಾಗಿದೆ. 
 
ಕುಡಿದು ಚಾಲನೆ ಮಾಡುವಾಗ ಪಾದಚಾರಿಗಳ ಮೇಲೆ ಹತ್ತಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದ ಪ್ರಕರಣ ಇದಾಗಿದ್ದು, ಇದು ಕಳೆದ 2002ರ ಸೆ. 27 ಮತ್ತು 28ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಸುಮಾರು 12 ವರ್ಷಗಳ ಸುಧೀರ್ಘ ವಿಚಾರಣೆಯ ಬಳಿಕ ಇಂದು ಅಂತಿಮ ತೀರ್ಪು ಪ್ರಕರವಾಗುತ್ತಿದ್ದು, ಸಂಜೆಯೊಳಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ಮುಂಬೈ ನಗರದ ಬಾಂದ್ರಾದಲ್ಲಿ ನಡೆದ ಪ್ರಕರಣ ಇದಾಗಿದೆ. 

ವೆಬ್ದುನಿಯಾವನ್ನು ಓದಿ