ಮುಂಗಾರು ಅಧಿವೇಶನಕ್ಕೆ ವಿರೋಧ ಪಕ್ಷಗಳು ತಡೆಯಾಗುವುದಿಲ್ಲ: ಭರವಸೆಯಲ್ಲಿ ಜೇಟ್ಲಿ

ಶುಕ್ರವಾರ, 3 ಜುಲೈ 2015 (16:33 IST)
ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಬಿರುಗಾಳಿಯಾಗಿ ಬೀಸುವ ಆತಂಕ ಒಳಮನಸ್ಸಿನಲ್ಲಿದ್ದರೂ, ಸದನ ಸುಗಮವಾಗಿ ನಡೆಯಲು ವಿರೋಧ ಪಕ್ಷಗಳು ಅಡ್ಡಿ ಪಡಿಸಲಾರರು ಎಂದು ಜೇಟ್ಲಿ ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ.
 
"ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಪ್ರಮುಖ ಮಸೂದೆಗಳು ಮಂಡನೆಯಾಗಬೇಕಿದ್ದು, ಲಲಿತ್ ಮೋದಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸುಗಮ ಕಲಾಪಕ್ಕೆ ತಡೆಯಾಗಲಾರರು ಎಂದು ನಂಬಿದ್ದೇನೆ", ಎಂದು ಜೇಟ್ಲಿ ಹೇಳಿದ್ದಾರೆ. 
 
"ಕೆಲ ಮಸೂದೆಗಳು (ಭೂ ಸ್ವಾಧೀನ ಕಾಯಿದೆಯ ತಿದ್ದುಪಡಿ, ಮತ್ತು ಸರಕು ಮತ್ತು ಸೇವಾ ತೆರಿಗೆ ಪರಿಚಯ) ದೇಶದ ಅಭಿವೃದ್ಧಿಗೆ ಬಹಳ ನಿರ್ಣಾಯಕ.  ಯಾವುದೇ ರಾಜಕೀಯ ಪಕ್ಷ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿರೋಧಿ ಸ್ಥಾನವನ್ನು ತೆಗೆದುಕೊಳ್ಳ ಬಯಸುವುದಿಲ್ಲ. ಲಲಿತ್ ಮೋದಿ ಪ್ರಕರಣವನ್ನು ಎತ್ತಿ ಕಲಾಪಕ್ಕೆ ತಡೆ ಒಡ್ಡುವುದಿಲ್ಲ ಎಂದು ನಾನು ಭಾವಿಸುತ್ತೇನೆ", ಎಂದು ಜೇಟ್ಲಿ ತಿಳಿಸಿದ್ದಾರೆ.
 
ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಮುಂಗಾರು ಕಲಾಪವನ್ನು ಸಂಪೂರ್ಣವಾಗಿ ಧೂಳೀಪಟ ಮಾಡುವ ಸಾಧ್ಯತೆಗಳು ಇರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಜೇಟ್ಲಿ ಈ ರೀತಿಯಾಗಿ ಉತ್ತರಿಸಿದ್ದಾರೆ. 
 
ತಮ್ಮನ್ನು ಸೇರಿದಂತೆ ಬಿಜೆಪಿಯ ಹಲವು ನಾಯಕರ ಜತೆ ತಮ್ಮ ನಂಟು ಇರುವ ಕುರಿತು ಲಲಿತ್ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿರುವುದರ ಕುರಿತು ಜೇಟ್ಲಿ ನೇರ ಉತ್ತರವನ್ನು ನೀಡುವಲ್ಲಿ ನುಣುಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ