ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ವಿದ್ಯಾರ್ಥಿನಿ

ಬುಧವಾರ, 28 ಜನವರಿ 2015 (19:45 IST)
ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಕಂಧಮಾಲ್‌ ಜಿಲ್ಲೆಯ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆಯನ್ನು ಅನುಸರಿಸಿ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇಬ್ಬರು ಗುತ್ತಿಗೆ ಶಿಕ್ಷಕಿಯರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತು ಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಿದ್ದರೂ ಹುಡುಗಿಯು ಗರ್ಭವತಿ ಆದಂದಿನಿಂದ ತೊಡಗಿ ಹೆರಿಗೆಯ ವರೆಗೂ ಹಾಸ್ಟೆಲ್‌ನ ದಾದಿಗೆ, ಶಿಕ್ಷಕಿಯರಿಗೆ ವಿಷಯವೇ ಗೊತ್ತಾಗಲಿಲ್ಲವಂತೆ !
 
ಹತ್ತನೇ ತರಗತಿಯ ವಿದ್ಯಾರ್ಥಿನಿಯು ಕಳೆದ ಶುಕ್ರವಾರ ವಸತಿ ಶಾಲೆಯ ಹಾಸ್ಟೆಲ್‌ ನಲ್ಲಿ ಮಗುವಿಗೆ ಜನ್ಮ ನೀಡಿದ್ದಳು.
 
ಘಟನೆಯನ್ನು ಅನುಸರಿಸಿ ಲಿಂಗಾಂಗದಾ ವಸತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾಲತಾ ಪಾಟಿಲ್‌ ಅವರನ್ನು ಜಿಲ್ಲಾಡಳಿತ ಅಧಿಕಾರಿಗಳು ಅಮಾನತುಗೊಳಿಸಿದರು. ಮಾತ್ರವಲ್ಲದೆ ಗುತ್ತಿಗೆ ಶಿಕ್ಷಕಿಯರಾದ ಸಶ್ಮಿತಾ ಪರೀದಾ ಮತ್ತು ನಮಿತಾ ಪ್ರಧಾನ್‌ ಅವರನ್ನು ಮಂಗಳವಾರ ಗುತ್ತಿಗೆಯಿಂದ ತೆಗೆದು ಹಾಕಿದರು.
 
ಹಾಸ್ಟೆಲ್‌ನಲ್ಲಿ ಪ್ರಸೂತಿ ದಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್‌ ಬಿ ಪ್ರಧಾನ್‌ ಅವರನ್ನು ಕೂಡ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿಯ ದೇಹಾವಸ್ಥೆ ಹಾಗೂ ಆರೋಗ್ಯದಲ್ಲಿನ ಬದಲಾವಣೆಯನ್ನು ಹೆರಿಗೆಯ ತನಕವೂ ಹಾಸ್ಟೆಲ್‌ನ ಎಎನ್‌ಎಂ ಮತ್ತು ಶಿಕ್ಷಕಿಯರಿಗೆ ತಿಳಿಯದೇ ಹೋದದ್ದು ಹೇಗೆ? ಇದು ಕರ್ತವ್ಯ ನಿರ್ವಹಣೆಯಲ್ಲಿನ ಸಂಪೂರ್ಣ ನಿರ್ಲಕ್ಷ್ಯವನ್ನು ತೋರ್ಪಡಿಸುತ್ತದೆ ಎಂದು ಕಂಧಮಾಲ್‌ ಜಿಲ್ಲಾಧಿಕಾರಿ ಎನ್‌ ತಿರುಮಲ ನಾಯ್ಕ ತಿಳಿಸಿದ್ದಾರೆ.
 
ಖಜೂರಿಪಾಡ ಬ್ಲಾಕ್‌ ಎಕ್ಸ್‌ಟೆನ್ಶನ್‌ ಅಧಿಕಾರಿಯವರು ನೀಡಿರುವ ದೂರಿನ ಪ್ರಕಾರ ತಾವು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ