ಸಲ್ಮಾನ್ ಖಾನ್‌ ಜಾಮೀನು ರದ್ದುಗೊಳಿಸಿ: ಬಿಜೆಪಿ ಮನವಿ

ಸೋಮವಾರ, 27 ಜುಲೈ 2015 (13:18 IST)
ಗಲ್ಲು ಶಿಕ್ಷೆಗೆ ಗುರಿಯಾಗಿರುವ 1993ರ ಮುಂಬೈ ಸರಣಿ ಬಾಂಬ್‌‌ ಸ್ಫೋಟದ ಅಪರಾಧಿ ಯಾಕೂಬ್‌‌ ಮೆಮೊನ್‌‌‌ ಪರವಹಿಸಿ ನಟ ಸಲ್ಮಾನ್‌‌‌ ಖಾನ್‌‌ ನೀಡಿದ್ದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ನಟನಿಗೆ ನೀಡಲಾಗಿರುವ ಜಾಮೀನನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ಬಿಜೆಪಿ ಆಗ್ರಹಿಸಿದೆ. 

ಮಹಾರಾಷ್ಟ್ರ ಬಿಜೆಪಿ ಯುವ ಘಟಕ ಮುಂಬೈನ ಬಾಂದ್ರದಲ್ಲಿರುವ ಸಲ್ಲು ನಿವಾಸದ ಮುಂದೆ ಪ್ರತಿಭಟನೆ ನಡೆಸಿದರೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಖರ್ ರಾಜ್ಯಪಾಲ ಸಿ. ಎಚ್. ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ 2002ರಲ್ಲಿ ನಡೆದ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. 
 
ಅಲ್ಲದೇ ಇಂತಹ ಮೂರ್ಖನನ್ನು ಭಾರತೀಯ ಚಿತ್ರರಂಗ ಹೇಗೆ ಐಕಾನ್ ಆಗಿ  ಒಪ್ಪಿಕೊಂಡಿದೆ ಎಂದು ಬಿಜೆಪಿ ಕಿಡಿಕಾರಿದೆ.
 
ಸಲ್ಲು ಮಾಡಿರುವ ಒಂದು ಟ್ವೀಟ್ ಅವರಿಗೆ ದೊಡ್ಡಮಟ್ಟದ ಸಮಸ್ಯೆಯನ್ನು ತಂದಿಟ್ಟಿದೆ. ಇತ್ತೀಚಿಗೆ ಅವರ ತಂದೆ ಸಲೀಂ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದ ಬಿಜೆಪಿಯೇ ಈಗ ಸಲ್ಮಾನ್ ಜಾಮೀನು ರದ್ದುಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 
 
1993ರ ಮುಂಬೈ ಬಾಂಬ್ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಲು ಸರ್ಕಾರ ಜುಲೈ 30ನ್ನು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಯಾಕೂಬ್‌ಗೆ ನೀಡಲಾಗುತ್ತಿರುವ ಗಲ್ಲುಶಿಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಪ್ರಕರಣದಲ್ಲಿ ಯಾಕೂಬ್ ಸಹೋದರ ಟೈಗರ್ ಮೆಮನ್ ನಿಜವಾದ ಅಪರಾಧಿಯಾಗಿದ್ದಾನೆ. ಆದ್ದರಿಂದ ಆತನನ್ನು ಗಲ್ಲಿಗೇರಿಸಿ, ಅದನ್ನು ಬಿಟ್ಟು. ಯಾಕೂಬ್‌ಗೇಕೆ ಶಿಕ್ಷೆ ಎಂದು ಪ್ರಶ್ನಿಸಿ ಅವರು ಟ್ವೀಟ್ ಮಾಡಿದ್ದರು.
 
ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಹೇಳಿಕೆಗಳನ್ನು ಹಿಂಪಡೆದಿದ್ದ ಸಲ್ಲು ಕ್ಷಮೆ ಯಾಚಿಸಿದ್ದರು 
 
ತಮ್ಮ ಮಗನ ಟ್ವೀಟ್‌ನ್ನು ಕಂಡಿಸಿದ್ದ ತಂದೆ ಸಲೀಂ ಖಾನ್ "ಸಲ್ಮಾನ್‌‌ ಹೇಳಿಕೆ ಅರ್ಥಹೀನ ಮತ್ತು ಅಜ್ಞಾನದಿಂದ ಕೂಡಿದ್ದು, ಹಾಸ್ಯಾಸ್ಪದವಾಗಿದೆ. ಇದನ್ನು ನಾನು ಕೂಡ ಒಪ್ಪುವುದಿಲ್ಲ. ಈ ಹೇಳಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು", ಎಂದು ಕೇಳಿಕೊಂಡಿದ್ದರು.
 
ಆದರೆ ಸಲ್ಮಾನ್‌‌ರ ಟ್ವೀಟ್‌‌ಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. 

ವೆಬ್ದುನಿಯಾವನ್ನು ಓದಿ