ಮಹಿಳಾ ಸಹೋದ್ಯೋಗಿಯ ಜತೆ ಅಸಭ್ಯವಾಗಿ ವರ್ತನೆ: ನ್ಯಾಯಾಧೀಶರ ಅಮಾನತು

ಗುರುವಾರ, 2 ಜುಲೈ 2015 (17:48 IST)
ಹಿಮಾಚಲ ಪ್ರದೇಶದ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಒಬ್ಬರು ಮಹಿಳಾ ಸಹೋದ್ಯೋಗಿ ನೀಡಿದ ದೂರಿನ ಪರಿಣಾಮ ಅಮಾನತುಗೊಂಡಿದ್ದಾರೆ. 
 
"ಜೂನ್ 11 ರಿಂದ ಜೂನ್ 13 ರವರೆಗೆ ಮನಾಲಿಯಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ನ್ಯಾಯಾಧೀಶರು ನನಗೆ ಹಿಂಸೆ ನೀಡಿದ್ದರು", ಎಂದು ಮಹಿಳೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ  ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸಿವಿಲ್ ನ್ಯಾಯಾಧೀಶರನ್ನು ಅಮಾನತುಗೊಳಿಸಿದ್ದಾರೆ. 
 
ಘಟನೆಯ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಮುಖ್ಯ ನ್ಯಾಯಮೂರ್ತಿ ಮನ್ಸೂರ್ ಅಹಮದ್ ಮಿರ್ ಎರಡು ತಿಂಗಳೊಳಗೆ ಈ ಕುರಿತ ಸಂಪೂರ್ಣ ತನಿಖಾ ವರದಿ ತಮ್ಮ ಮುಂದಿರಬೇಕು ಎಂದು ಆದೇಶ ನೀಡಿದ್ದಾರೆ.
 
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಕಾನೂನು ಸೇವೆ ಪ್ರಾಧಿಕಾರ, ಹೊಟೆಲ್ ಅಂಬಾಸಿಡರ್, ಮನಾಲಿಯಲ್ಲಿ 'ಭಾರತದಲ್ಲಿ ಡ್ರಗ್ ಮೆನೇಸ್-  "ಅವಲೋಕನ, ಸವಾಲುಗಳು ಮತ್ತು ಪರಿಹಾರಗಳು', ಎಂಬ ವಿಷಯದಲ್ಲಿ ಸಮಾವೇಶವನ್ನು ನಡೆಸಿತ್ತು.  ಪಂಜಾಬ್, ಚಂಡೀಘಢ, ಹರಿಯಾಣ, ದೆಹಲಿ, ಉತ್ತರಾಖಂಡ್ ಮತ್ತು ರಾಜಸ್ಥಾನದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಮತ್ತು ಹಿಮಾಚಲ ಪ್ರದೇಶದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಅಧ್ಯಕ್ಷರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ