ಲೋಕಪಾಲ್‌ಗಾಗಿ ಒಬ್ಬನೇ ಹೋರಾಡುವ ಸಾಮರ್ಥ್ಯ ನನಗಿದೆ: ಅಣ್ಣಾ ಹಜಾರೆ

ಬುಧವಾರ, 21 ಜನವರಿ 2015 (18:07 IST)
ಕಿರಣ್ ಬೇಡಿ ಬಿಜೆಪಿ ಸೇರ್ಪಡೆಯಾಗಿರುವುದರ ಕುರಿತು ಮುನಿಸಿಕೊಂಡಿರುವ ಸ್ವಾತಂತ್ರ ಹೋರಾಟಗಾರ ಅಣ್ಣಾ ಹಜಾರೆ ಲೋಕಪಾಲ್ ಬಿಲ್ ಪಾಸ್ ಮಾಡಿಸಲು ಒಬ್ಬರೇ ಹೋರಾಡಲು ತಾನು ಸಮರ್ಥನಾಗಿದ್ದೇನೆ ಎಂದಿದ್ದಾರೆ. 
 
ಸುದ್ದಿ ವಾಹಿನಿ ಜತೆ ಮಾತನಾಡುತ್ತಿದ್ದ ಹಜಾರೆ, "ಲೋಕಪಾಲ್ ಕುರಿತು ಆಂದೋಲನವನ್ನು ಒಬ್ಬನೇ ಮುಂದುವರೆಸುವ ಸಾಮರ್ಥ್ಯ ನನಗಿದೆ. ಕಿರಣ್ , ಅರವಿಂದ್  ಅಥವಾ  ಕೊಳಕು ರಾಜಕೀಯದ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ", ಎಂದು ಹೇಳುವುದರ ಮೂಲಕ ತಮ್ಮ ಮುನಿಸನ್ನು  ಪರೋಕ್ಷವಾಗಿ ಪ್ರಕಟಿಸಿದ್ದಾರೆ.
 
ಮಾಜಿ ಐಪಿಎಸ್ ಅಧಿಕಾರಿ ಮತ್ತು ಈಗ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಕಿರಣ್ ಬೇಡಿ ಮತ್ತು ಆಪ್ ನಾಯಕ ಲೋಕಪಾಲ್ ಮಸೂದೆ ಜಾರಿ ಕುರಿತ ಅಣ್ಣಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲ ಸಮಯದ ನಂತರ ಕೇಜ್ರಿವಾಲ್ ಆಂದೋಲನವನ್ನು ತ್ಯಜಿಸಿ ಪಕ್ಷವನ್ನು ಕಟ್ಟಿದರು. ಆದರೆ ಬೇಡಿ ಮಾತ್ರ ಅಣ್ಣಾ ಜತೆ ಉಳಿದುಕೊಂಡರು. 
 
ಇತ್ತೀಚೆಗೆ ಬೇಡಿ ಸಹ ರಾಜಕೀಯ ಸೇರಿದ್ದು ಹಜಾರೆಯವರಿಗೆ ನೋವು ತಂದಿದೆ. ರಾಜಕೀಯ ಸೇರುವ ಮೊದಲು ಒಮ್ಮೆ ಅವರು ತಮ್ಮನ್ನು ಸಂಪರ್ಕಿಸಬಹುದಿತ್ತು ಎಂದು ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದರು. 
 
ತಾವು ಕಮಲ ಪಕ್ಷ ಸೇರಿರುವುದರ ಬಗ್ಗೆ ಹೇಳಲು ಬೇಡಿ ಅಣ್ಣಾರವರಿಗೆ ತಿಳಿಸಲು ಯತ್ನಿಸಿದರೂ ಅವರು ಬೇಡಿ ಜತೆ ಮಾತನಾಡುವುದರಿಂದ  ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. 

ವೆಬ್ದುನಿಯಾವನ್ನು ಓದಿ