ಉಗ್ರ ಟೈಗರ್ ಮೆಮೊನ್ ಭೇಟಿಯಾಗಿದ್ದ ಕಾಂಗ್ರೆಸ್ ಶಾಸಕ

ಶನಿವಾರ, 1 ಆಗಸ್ಟ್ 2015 (11:06 IST)
1993ರ ಮುಂಬೈ ಸ್ಫೋಟದ ಮಾಸ್ಟರ್‌ ಮೈಂಡ್, ಮೊನ್ನೆ ತಾನೇ ಗಲ್ಲಿಗೇರಿಸಲಾದ ಉಗ್ರ ಯಾಕೂಬ್‌ ಮೆಮನ್‌ ಸಹೋದರ ಟೈಗರ್‌ ಮೆಮನ್‌ನನ್ನು ತಾವು ಪಾಕಿಸ್ತಾನದಲ್ಲಿ ಭೇಟಿಯಾಗಿದ್ದಾಗಿ ಹೇಳುವ ಮೂಲಕ ಕಾಂಗ್ರೆಸ್‌ ಶಾಸಕ, ಮಾಜಿ ಉಗ್ರ ಉಸ್ಮಾನ್‌ ಮಜೀದ್‌ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. 

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಾನು ಟೈಗರ್‌ ಮೆಮನ್‌ನನ್ನು ಭೇಟಿಯಾಗಿದ್ದೆ ಎಂದಿರುವ ಉತ್ತರ ಕಾಶ್ಮೀರದ ಬಂದಿಪೋರಾ ಪ್ರಾಂತ್ಯದ ಶಾಸಕ ಉಸ್ಮಾನ್  ಈ ವೇಳೆ ಸಹೋದರ ಯಾಕೂಬ್‌ ಮೆಮನ್‌  ಭಾರತೀಯ ಅಧಿಕಾರಿಗಳ ಬಳಿ ಶರಣಾಗಿರುವುದ್ದಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ತನ್ನನ್ನೂ ಕೊಲ್ಲಬಹುದು ಎಂಬ ಆತಂಕ ಹೊರಹಾಕಿದ್ದ ಎಂದು ಹೇಳಿದ್ದಾರೆ.
 
ಇದೇ ಭಯದಿಂದ ಆತ ದುಬಾಯಿಗೆ ಪಲಾಯನ ಮಾಡಿದ್ದ. ಆದರೆ ಐಎಸ್ಐಗೆ ಆತ ಭಾರತಕ್ಕೆ ಶರಣಾಗುವುದು ಇಷ್ಟವಿರಲಿಲ್ಲ.  ಯಾಕೂಬ್ ಅಣ್ಣನ ಬಂಧನ ಅಥವಾ ಶರಣಾಗತಿಗೆ ವೇದಿಕೆಯನ್ನು ಸಿದ್ಧ ಮಾಡಬಹುದು ಎಂಬ ಭಯ ಅವರಿಗಿತ್ತು. ಆದ್ದರಿಂದ ಸಂಧಾನ ಮಾಡಿಕೊಂಡು ಆತನನ್ನು ಮರಳಿ ಪಾಕ್‌ಗೆ ಕರೆ ತಂದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. 
 
"ಟೈಗರ್‌ನನ್ನು ನಾನು ಮೂರರಿಂದ ನಾಲ್ಕು ಬಾರಿ ಭೇಟಿಯಾಗಿದ್ದೇನೆ. ಮುಂಬೈ ಸ್ಫೋಟಕ್ಕೆ ಬಾಬ್ರಿ ಮಸೀದಿ ಧ್ವಂಸವೇ ಕಾರಣ", ಎಂದಿದ್ದ ಎಂದು ಉಸ್ಮಾನ್‌ ಹೇಳಿದ್ದಾರೆ.
 
ಉಸ್ಮಾನ್‌ ಕೆಲ ವರ್ಷಗಳ ಹಿಂದೆ ಭಯೋತ್ಪಾದಕ ತಂಡದಲ್ಲಿದ್ದರು. ಬಳಿಕ ರಕ್ತಪಾತದ ಹಾದಿಯನ್ನು ತೊರೆದು 2002ರಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಡಿದ್ದಾರೆ. 

ವೆಬ್ದುನಿಯಾವನ್ನು ಓದಿ