ನಾನು ಕೂಡ ಟಿಬಿಯಿಂದ ಬಳಲಿದ್ದೆ, ಈಗ ಸಂಪೂರ್ಣ ಗುಣಮುಖನಾಗಿದ್ದೇನೆ: ಬಿಗ್ ಬಿ

ಸೋಮವಾರ, 22 ಡಿಸೆಂಬರ್ 2014 (17:19 IST)
ಕ್ಷಯ ರೋಗದ ಬಗ್ಗೆ ಇರುವ  ಮೂಡನಂಬಿಕೆಗಳ ವಿರುದ್ಧ ಜಾಗೃತಿ ನೀಡುವ ಉದ್ದೇಶದಿಂದ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ತಾವು ಕೂಡ ಈ ಕಾಯಿಲೆಯಿಂದ ಬಳಲಿದ್ದುದರ ಕುರಿತು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.
ಬಿಎಮ್‌ಸಿ ಕ್ಷಯರೋಗದ ವಿರುದ್ಧ ಆಯೋಜಿಸಿದ್ದ  'ಟಿಬಿ ಸೋತರೆ, ದೇಶ ಗೆಲ್ಲುತ್ತದೆ' ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, 2,000 ವರ್ಷದಲ್ಲಿ  ದೂರದರ್ಶನಕ್ಕಾಗಿ ಗೇಮ್ ಶೋ ಒಂದರ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದ ಸಂದರ್ಭದಲ್ಲಿ ತಮಗೆ ಟಿಬಿ ಕಾಯಿಲೆ ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.
 
ಸಾಮಾಜಿಕ- ಆರ್ಥಿಕ ಸ್ಥಾನಮಾನ ಗಣನೆಗೆ ಇಲ್ಲದೇ ಟಿಬಿ ಯಾರಿಗೆ ಬೇಕಾದರೂ ಬಾಧಿಸಬಹುದು ಎಂದು ಅವರು ಒತ್ತಿ ಹೇಳಿದರು.  ಈ ಕಾಯಿಲೆಯಿಂದ ವರ್ಷದಲ್ಲಿ 3 ಲಕ್ಷ ಭಾರತೀಯರು  ದುರ್ಮರಣವನ್ನಪ್ಪುತ್ತಾರೆ ಎಂದು ಅವರು, "ನನಗೆ ಇದ್ದಕ್ಕಿದ್ದಂತೆ ದುರ್ಬಲತೆ ಭಾವ ಕಾಡತೊಡಗಿತು. ವೈದ್ಯಕೀಯ ಪರೀಕ್ಷೆಗಳ ನಂತರ ನನಗೆ ಟಿಬಿ ತಗುಲಿದೆ ಎಂದು ಖಚಿತವಾಯಿತು. ಸತತ ಒಂದು ವರ್ಷ  ಸಮರ್ಪಕವಾಗಿ ಔಷಧಿ ಸೇವಿಸಿ ನಾನೀ ಕಾಯಿಲೆಯನ್ನು ಜಯಿಸಿದೆ. ಇಂದು ಆ ಮಾರಕ ಕಾಯಿಲೆಯಿಂದ ಸಂಪೂರ್ಣ ಮುಕ್ತನಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಎಂದ ಬಿಗ್ ಬಿ ಆರಂಭಿಕ ಹಂತದಲ್ಲೇ  ಚಿಕಿತ್ಸೆ ಪಡೆಯುವಂತೆ ಜನರಲ್ಲಿ ವಿನಂತಿಸಿಕೊಂಡರು.
 
"ನಾನೀ ಕಾಯಿಲೆಯಿಂದ ಬಳಲಿದ ಕುರಿತು ಸಾರ್ವಜನಿಕವಾಗಿ ಪ್ರಸ್ತಾಪಿಸಿರಲಿಲ್ಲ. ಆದರೆ ಇದು ಜಾಗೃತಿ ಕೈಗೊಳ್ಳಬೇಕಾದ ಸಮಯ. ಈಗ ಉತ್ತಮ ಔಷಧಗಳು ಲಭ್ಯವಿವೆ.  ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳುವುದನ್ನು ಹೊರತು ಪಡಿಸಿ ನೀವೇನನ್ನು ಮಾಡಬೇಕಿಲ್ಲ" ಎಂದು ಜನರಲ್ಲಿ ಅರಿವನ್ನು ಮೂಡಿಸಲು ಮೇರು  ನಟ ಅಮಿತಾಬ್ ಬಚ್ಚನ್ ಪ್ರಯತ್ನಿಸಿದರು.

ವೆಬ್ದುನಿಯಾವನ್ನು ಓದಿ