ಜನತೆ ಬಯಸಿದಲ್ಲಿ ರಾಜಕೀಯಕ್ಕೆ ಧುಮುಕುತ್ತೇನೆ: ಹಾರ್ದಿಕ್ ಪಟೇಲ್

ಗುರುವಾರ, 1 ಅಕ್ಟೋಬರ್ 2015 (17:33 IST)
ಪಟಿದಾರ್ ಅನಾಮತ್ ಅಂದೋಲನ್ ಸಮಿತಿಯ ನಾಯಕ ಹಾರ್ದಿಕ್ ಪಟೇಲ್, ಅಖಿಲ್ ಭಾರತೀಯ ಪಟೇಲ್ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದ್ದು, ಜನತೆ ಬಯಸಿದಲ್ಲಿ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ.
 
ಸಮಯ ಬಂದಾಗ ರಾಜಕೀಯ ಪ್ರವೇಶಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಇದು ನಾನೊಬ್ಬನೆ ನಿರ್ಧರಿಸುವ ವಿಷಯವಲ್ಲ. ಪಟೇಲ್ ಸಮುದಾಯದ ನಾಯಕರು ಒಂದಾಗಿ ತೆಗೆದುಕೊಳ್ಳುವ ತೀರ್ಮಾನವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ದೆಹಲಿ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಕೂಡಾ ಆರಂಭದಲ್ಲಿ ಪ್ರತಿಭಟನೆಯ ದಾರಿ ಹಿಡಿದಿದ್ದರೂ ನಂತರ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾಗಿದ್ದಾರೆ. ಅದರಂತೆ, ನಿಮಗೆ ರಾಜಕೀಯ ಪ್ರವೇಶಿಸುವ ಇರಾದೆಯಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಪ್ರವೇಶಿಸುವ ನಿರ್ಧಾರ ತುಂಬಾ ಮಹತ್ವದ್ದಾಗಿದ್ದರಿಂದ ಅದಕ್ಕೆ ಸಮಯದ ಅಗತ್ಯವಿದೆ ಎಂದರು.
 
22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ.  ಕುರ್ಮಿಗಳು, ಮರಾಠರು, ಪಟಿದಾರ್ ಮತ್ತು ಗುಜ್ಜರ್ ಸಮುದಾಯಗಳನ್ನು ಒಂದುಗೂಡಿಸಿ, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವಕರ ಪರವಾಗಿ ಅಖಿಲ್ ಭಾರತೀಯ ಪಟೇಲ್ ನವನಿರ್ಮಾಣ ಸೇನೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
 
ಅಖಿಲ್ ಭಾರತೀಯ ಪಟೇಲ್ ನವನಿರ್ಮಾಣ ಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ ಅಖಿಲೇಶ್ ಕಟಿಯಾರ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಹಾರ್ದಿಕ್ ಪಟೇಲ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ