ಭೂ ಕಬಳಿಕೆ ಮಾಡುತ್ತಿಲ್ಲ, ಕಾನೂನಿನಂತೆ ಹಣ ಪಾವತಿಸಿ ಭೂಮಿ ಪಡೆಯುವೆ: ಹೇಮಾಮಾಲಿನಿ

ಸೋಮವಾರ, 1 ಫೆಬ್ರವರಿ 2016 (20:25 IST)
ಭೂ ಕಬಳಿಕೆ ಮಾಧ್ಯಮಗಳ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಸಂಸದೆ ಹೇಮಾಮಾಲಿನಿ, ಕಾನೂನಿನ ಪ್ರಕಾರ ಭೂಮಿ ಖರೀದಿಗೆ ಅಗತ್ಯವಿರುವ ಹಣವನ್ನು ಪಾವತಿಸುವುದಾಗಿ ಹೇಳಿದ್ದಾರೆ
 
ಭೂಮಿ ಇನ್ನೂ ನನ್ನ ವಶಕ್ಕೆ ಬಂದಿಲ್ಲ. ಆದಾಗಲೇ ವಿವಾದಕ್ಕೆ ಕಾರಣವಾಗಿದೆ. ಒಂದು ವೇಳೆ ಭೂಮಿ ನನಗೆ ದೊರೆತಲ್ಲಿ ಕಾನೂನಿನ ಪ್ರಕಾರ ಭೂಮಿಯ ಮೌಲ್ಯದ ಹಣವನ್ನು ಪಾವತಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
 
ನಾನು  ಭೂಕಬಳಿಕೆ ಮಾಡುತ್ತಿದ್ದೇನೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಕಳೆದ 20 ವರ್ಷಗಳಿಂದ ಮುಂಬೈನ ಚಿತ್ರರಂಗದಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಮುಂಬೈಯಲ್ಲಿ ಭೂಮಿ ಪಡೆಯುವುದು ನನ್ನ ಹಕ್ಕಾಗಿದೆ. ಭೂಮಿಗೆ ಎಷ್ಟು ಹಣ ಪಾವತಿಸಬೇಕು ಎನ್ನುವುದು ಕೂಡಾ ನನಗೆ ಗೊತ್ತಿಲ್ಲ. ಆದರೆ, ಕಾನೂನಿನ ಪ್ರಕಾರ ಹಣ ನೀಡಿ ಭೂಮಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.   
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರೀದಿಸುತ್ತಿರುವ ಭೂಮಿಯಲ್ಲಿ ಡ್ಯಾನ್ಸ್ ಆಕಾಡೆಮಿ ಕಟ್ಟಡವನ್ನು ನಿರ್ಮಿಸಿ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸಿಕೊಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ಸಂಸದೆ ಹೇಮಾಮಾಲಿನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ ಪ್ರತಿ ಚದುರ ಮೀಟರ್‌ಗೆ ಕೇವಲ 35 ರೂಪಾಯಿಗಳ ದರ ನಿಗದಿ ಪಡಿಸಿ ಸರಕಾರ ಆದೇಶ ಹೊರಡಿಸಿತ್ತು. ಆದರೆ, ಆರ್‌ಟಿಐ ಕಾರ್ಯಕರ್ತ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಾಗ ಕೇವಲ 70 ಸಾವಿರ ರೂಪಾಯಿಗಳಿಗೆ ಕೋಟಿ ಕೋಟಿ ಬೆಲೆಬಾಳುವ ಭೂಮಿ ನೀಡುವ ಸರಕಾರದ ದುರುದ್ದೇಶ ಬಯಲಿಗೆ ಬಂದಿತ್ತು.

ವೆಬ್ದುನಿಯಾವನ್ನು ಓದಿ