ನನ್ನ ಹೆಸರು ಉಮರ್ ಖಾಲಿದ್, ನಾನು ಉಗ್ರನಲ್ಲ!

ಸೋಮವಾರ, 22 ಫೆಬ್ರವರಿ 2016 (14:48 IST)
ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)ವಿನಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಆರೋಪವನ್ನು ಎದುರಿಸುತ್ತಿರುವ 6 ವಿದ್ಯಾರ್ಥಿಗಳಲ್ಲಿ ಒಬ್ಬನಾಗಿರುವ ಉಮರ್ ಖಾಲಿದ್ ನಾನು ಭಯೋತ್ಪಾದಕನಲ್ಲ. ಕ್ಯಾಂಪಸ್‌ನ್ನು ಗುರಿಯಾಗಿಸಲು ಬಿಜೆಪಿ ಸರ್ಕಾರಕ್ಕೆ ಒಂದು ನೆಪ ಬೇಕು. ಅದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾನೆ. 
 
ದೇಶದ್ರೋಹಿ ಘೋಷಣೆ ಕೂಗಿದ ವಿವಾದ ಗಂಭೀರವಾಗುತ್ತಿದ್ದಂತೆಯೇ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಪರಾರಿಯಾಗಿದ್ದ ವಿದ್ಯಾರ್ಥಿ ತಮ್ಮನ್ನು ಭಯೋತ್ಪಾದಕ ಎಂಬ ರೀತಿಯಲ್ಲಿ ಬಿಂಬಿಸಿದ್ದಕ್ಕೆ ಮಾಧ್ಯಮಗಳನ್ನು ಖಂಡಿಸಿದ್ದು, ನನ್ನ ಹೆಸರು ಉಮರ್ ಖಾಲಿದ್, ಆದರೆ ನಾನು ಉಗ್ರನಲ್ಲ. ನನ್ನ ಬಳಿ ಪಾಸ್ಪೋರ್ಟ ಇಲ್ಲ. ನಾನು ಒಮ್ಮೆ ಕೂಡ ಪಾಕಿಸ್ತಾನಕ್ಕೆ ಹೋಗಿಯೇ ಇಲ್ಲ ಎಂದು ಹೇಳಿದ್ದಾನೆ. 
 
ಅಡ್ಮಿನ್ ಬ್ಲಾಕ್ ಮುಂದೆ ನಿಂತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉಮರ್, ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಯುತ್ತಿರುವುದು ಫೆಬ್ರವರಿ 9ರಂದು ಆಯೋಜಿತಗೊಂಡಿದ್ದ ಕಾರ್ಯಕ್ರಮದ ಕಾರಣಕ್ಕಲ್ಲ. ಸರ್ಕಾರಕ್ಕೆ ನಮ್ಮನ್ನು ಗುರಿಯಾಗಿಸಲು ಒಂದು ನೆಪ ಬೇಕಿದೆ ಎಂದು ಕಿಡಿಕಾರಿದ್ದಾನೆ. 
 
ಉಮರ್‌ ಖಾಲಿದ್ ಸೇರಿದಂತೆ ದೇಶದ್ರೋಹದ ಆರೋಪ ಬಂದ ಬಳಿಕ ತಲೆ ಮರೆಸಿಕೊಂಡಿದ್ದ ವಿದ್ಯಾರ್ಥಿಗಳಾದ ಅನಿರ್ಬನ್‌ ಭಟ್ಟಾಚಾರ್ಯ, ರಾಮ ನಾಗ, ಅಶುತೋಷ್‌ ಕುಮಾರ್ ಹಾಗೂ ಅನಂತ್‌ ಪ್ರಕಾಶ್‌ ರವಿವಾರ ಕ್ಯಾಂಪಸ್‌ಗೆ ಮರಳಿದ್ದರು. 
 
ಕಾರ್ಯಕ್ರಮ ಆಯೋಜನೆಗೂ ಕೆಲವು ದಿನಗಳ ಮುನ್ನ ತಾನು ಗಲ್ಫ್ ಮತ್ತು ಕಾಶ್ಮೀರಕ್ಕೆ 800 ಫೋನ್ ಕರೆ ಮಾಡಿದ್ದೇನೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ