ಅಮ್ಮನ ಹಾಲು ಕುಡಿದಿದ್ದರೆ ನನ್ನ ಸಂದೇಶವನ್ನು ಪ್ರೆಸ್‌ನವರಿಗೆ ತೋರಿಸು: ಐಎಎಸ್ ಅಧಿಕಾರಿಗೆ ಮೇಲಾಧಿಕಾರಿಯ ಧಮ್ಕಿ

ಬುಧವಾರ, 30 ಜುಲೈ 2014 (10:21 IST)
ಅಮ್ಮನ ಹಾಲು ಕುಡಿದಿದ್ದು ನಿಜವಾದರೆ  ನನ್ನ ಸಂದೇಶವನ್ನು ಪ್ರೆಸ್‌ನವರಿಗೆ ತೋರಿಸು. ಈ ಧಮ್ಕಿ ಹಾಕಿದ್ದು  ಬೀದಿ ಬದಿಯಲ್ಲಿ ಓಡಾಡಿಕೊಂಡಿರುವ ಯಾರೋ ಪೋಕರಿ ಹುಡುಗನೆಂದುಕೊಂಡರೆ ಅದು ನಿಮ್ಮ ತಪ್ಪು ಅಭಿಪ್ರಾಯ.  ಈ ಬೆದರಿಕೆ ಮಾತುಗಳನ್ನಾಡಿದ್ದು ಹರಿಯಾಣದ ಮುಖ್ಯ ಸಚಿವ ಎನ್‌ಸಿ ಚೌಧರಿ. ಅದು ಕೂಡ ಐಎಎಸ್ ಅಧಿಕಾರಿಗೆ. 

"ಚೌಧರಿಯವರು ನನಗೆ ಬೆದರಿಕೆಯ ಮೊಬೈಲ್ ಸಂದೇಶ ಕಳುಹಿಸಿದ್ದಾರೆ" ಎಂದು ಐಎಎಸ್ ಅಧಿಕಾರಿ  ಪ್ರದೀಪ್ ಕಾಸನಿ ಆರೋಪಿಸಿದ್ದಾರೆ. "ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ನಾನು ನಿರಾಕರಿಸಿದ್ದಕ್ಕೆ, ಅಸಮಾಧಾನಗೊಂಡಿರುವ ಚೌಧರಿ ನನಗೆ ಈ ರೀತಿಯಲ್ಲಿ  ಸಂದೇಶ ಕಳುಹಿಸಿದ್ದಾರೆ" ಎಂದು ನೊಂದ ಅಧಿಕಾರಿ ಹೇಳಿದ್ದಾರೆ.
 
ಚೌಧರಿಯವರು ಕಳುಹಿಸಿದ ಸಂದೇಶ ಹೀಗಿದೆ- 'ಪ್ಲಿಸ್ ಎಂಜಾಯ್ ಯೂವರ್ ನ್ಯೂ ಸ್ಟೇಟಸ್ ಆಫ್ ಬಿಯಿಂಗ್ ಅ ಸೆಲೆಬ್ರಿಟಿ, ಬಟ್ ಅಗರ್ ಅಪನಿ ಮಾ ಕಾ ದುದ್ ಪಿಯಾ ಹೋ ತೋ ಮೆರೆ ಸಾರೇ ಮೆಸೆಜ್ ಪ್ರೆಸ್ ಕೊ ದಿಖಾ ದೇನಾ'( ಜನಪ್ರಿಯರಾಗುತ್ತಿರುವ ನಿಮ್ಮ ಹೊಸ ಸ್ಥಿತಿಯನ್ನು ಆನಂದಿಸಿ, ಆದರೆ ನಿಜವಾಗಿಯೂ ನಿನ್ನ ಅಮ್ಮನ ಎದೆ ಹಾಲು ಕುಡಿದಿದ್ದರೆ ನನ್ನ ಈ ಸಂದೇಶನವನ್ನು  ಪತ್ರಿಕೆಯವರಿಗೆ ತೋರಿಸು) .
 
ಇನ್ನೆರಡು ದಿನಗಳಲ್ಲಿ ನಿವೃತ್ತಿಯಾಗುತ್ತಿರುವ ಚೌಧರಿ ಅಧಿಕಾರಿಯ ಆರೋಪಗಳನ್ನು  ತಳ್ಳಿ ಹಾಕಿದ್ದು " ಅವರಿಂದ ಈ ರೀತಿಯ ಪ್ರತಿಕ್ರಿಯೆ ಬರುತ್ತಿರುವುದು ನನಗೆ ನೋವುಂಟು ಮಾಡುತ್ತಿದೆ.  ನಾವು ಒಬ್ಬರಿಗೊಬ್ಬರು  ಸಹೋದರರ ತರಹ ಇದ್ದೇವೆ ಮತ್ತು ಒಂದೇ ಜಿಲ್ಲೆಗೆ ಸೇರಿದ್ದೇವೆ. ನಾನು ಕಳುಹಿಸಿದ ಎಲ್ಲಾ ಸಂದೇಶಗಳು ಕೇವಲ ತಮಾಷೆಗಾಗಿ. ಸ್ನೇಹಿತರ ನಡುವೆ ಇಂತಹ ಮಾತುಗಳು  ಸಾಮಾನ್ಯ. ನನ್ನ ಈ ಸಂದೇಶದಿಂದ ಕಾಸನಿಯವರಿಗೆ ನೋವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ" ಎಂದಿದ್ದಾರೆ. 
 
ಚೌಧರಿಯವರ ವಿಷಾದದ ಪ್ರತಿಕ್ರಿಯೆಗೆ ಉತ್ತರಿಸಿರುವ ಕಸಾನಿ "ಸಂದೇಶಗಳು ನನಗೆ ಮಹತ್ವದಲ್ಲ. ಈ ಮೊದಲು ಒಮ್ಮೆಯು ಕೂಡ ನಾವು  ಸ್ನೇಹಿತರ ರೀತಿ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿರಲಿಲ್ಲ. ನಾನವರ  ಮೇಲೆ ಕೇಸ್ ದಾಖಲಿಸುತ್ತಿಲ್ಲ. ಅವರು ನನ್ನ ಬಾಸ್.  ಯಾವಾಗಲೂ ನಾನವರಿಗೆ ಅಪಾರ ಗೌರವ ತೋರಿದ್ದೇನೆ" ಎಂದಿದ್ದಾರೆ.    

ವೆಬ್ದುನಿಯಾವನ್ನು ಓದಿ