ಮೋದಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅಮಾನತು ಶಿಕ್ಷೆ!

ಗುರುವಾರ, 20 ಆಗಸ್ಟ್ 2015 (11:44 IST)
2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಧ್ವನಿ ಎತ್ತಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ಗುಜರಾತ್‌ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಸಂಜೀವ್ ಭಟ್ ಅವರನ್ನು ವಜಾ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರದ ಮುಖ್ಯಕಾರ್ಯದರ್ಶಿ ಜಿ.ಆರ್. ಅಲೋರಿಯಾ ಸ್ಪಷ್ಟಪಡಿಸಿದ್ದಾರೆ. ಭಟ್ 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ  ಜುನಾಗಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 
 
ಅನಧಿಕೃತ ಗೈರುಹಾಜರಾತಿ ಹಿನ್ನೆಲೆಯಲ್ಲಿ ಭಟ್ ಅವರನ್ನು ವಜಾಗೊಳಿಸಲಾಗಿದೆ ಎಂದು ಗುಜರಾತ್ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ ಇದನ್ನು ಅಲ್ಲಗಳೆದಿರುವ ಭಟ್, "ನಾನು ಪ್ರಾಮಾಣಿಕವಾಗಿ ಮತ್ತು ಉತ್ಸಾಹದಿಂದ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸರ್ಕಾರ ಆಧಾರವಿಲ್ಲದ ಆರೋಪಗಳ ಮೇಲೆ ನೆಪ ಮಾತ್ರದ ತನಿಖೆ ನಡೆಸಿ, ಸುಳ್ಳು ಆರೋಪ ಹೊರಿಸಿ ಕರ್ತವ್ಯದಿಂದ ವಜಾ ಮಾಡಿದೆ. ಸರ್ಕಾರಕ್ಕೆ ನನ್ನ ಸೇವೆ ಬೇಕಾಗಿಲ್ಲ", ಎಂದು ಫೇಸ್‌ಬುಕ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.
 
ಕೆಲಸಕ್ಕೆ ಗೈರು ಹಾಜರು ಮತ್ತು ಕಚೇರಿಯ ಕಾರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ 2011ರಲ್ಲಿ ಸಂಜೀವ್ ಭಟ್ ಅವರನ್ನು ಗುಜರಾತ್ ಸರ್ಕಾರ ಅಮಾನುತು ಗೊಳಿಸಿತ್ತು. ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣಕ್ಕೆ ಮತ್ತು 2002ರ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಾನಾವತಿ ಆಯೋಗದೆದುರು ಹಾಜರಾಗಲು ತಾವು ಅಹಮದಾಬಾದ್‌ನಲ್ಲಿರುವುದು ಅವಶ್ಯವೆಂದು ಭಟ್ ತಮ್ಮ ಗೈರು ಹಾಜರಿ ಬಗ್ಗೆ ಸ್ಪಷ್ಟನೆ ನೀಡಿದ್ದರು.
 
ಆದರೆ ಅವರು ನೀಡಿದ್ದ ಕಾರಣವನ್ನು ಒಪ್ಪಲು ನಿರಾಕರಿಸಿದ ಸರ್ಕಾರ ಅಧಿಕಾರಿಯನ್ನು ವಜಾಗೊಳಿಸಲು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಗೃಹ ಸಚಿವಾಲಯ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಜೀವ್ ಭಟ್ ಅವರನ್ನು ವಜಾಗೊಳಿಸಿದೆ. 

ವೆಬ್ದುನಿಯಾವನ್ನು ಓದಿ