350 ಕೋಟಿ ಅಕ್ರಮ ಆಸ್ತಿಗಳಿಸಿದ ಐಎಎಸ್ ಅಧಿಕಾರಿ ದಂಪತಿಗಳ ಅಮಾನತ್ತು

ಮಂಗಳವಾರ, 22 ಜುಲೈ 2014 (18:45 IST)
ಭಾರತೀಯ ಆಡಳಿತಾತ್ಮಕ ಸೇವೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಇಬ್ಬರು ಐಎಎಸ್ ಅಧಿಕಾರಿಗಳಾದ ಅರವಿಂದ್ ಜೋಶಿ ಮತ್ತು ಟಿನೂ ಜೋಶಿ ಅವರನ್ನು ಅಕ್ರಮ ಆಸ್ತಿ ಗಳಿಸಿದ ಆರೋಪದಿಂದಾಗಿ ಕೆಲಸದಿಂದ ವಜಾ ಮಾಡಲಾಗಿದೆ.  1979ರ  ಬ್ಯಾಚ್‌ನಲ್ಲಿ ಆಯ್ಕೆಯಾದ ಈ ದಂಪತಿಗಳನ್ನು ಸೋಮವಾರ ಸೇವೆಯಿಂದ ಕಿತ್ತು ಹಾಕಲಾಗಿದೆ.

ಫೆಬ್ರವರಿ 2010ರಲ್ಲಿ  ಆದಾಯ ತೆರಿಗೆ ಅಧಿಕಾರಿಗಳು ಈ ಅಧಿಕಾರಿ ದಂಪತಿಗಳ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಬಹಿರಂಗವಾಗಿತ್ತು. 
 
ದಾಳಿಯ ಸಂದರ್ಭದಲ್ಲಿ, ಐಟಿ ಅಧಿಕಾರಿಗಳು ರೂ .350 ಕೋಟಿ ಅಕ್ರಮ ಸಂಪತ್ತು ಮತ್ತು ಅವರಿಬ್ಬರ ಹೆಸರಿನಲ್ಲಿದ್ದ 3 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು. 
 
ಅದರ ಬಗ್ಗೆ ಮಾತನಾಡಿದ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ "ಐಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಅವರಿಬ್ಬರು ಯೋಗ್ಯರಲ್ಲ ಎಂದು 2011 ರಲ್ಲಿ ಯುಪಿಎಸ್ಸಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.
 
ಈಗ ಆರೋಪಿ ಅಧಿಕಾರಿಗಳಿಬ್ಬರಿಗೆ ಇರುವ ಎರಡು ಅವಕಾಶಗಳೆಂದರೆ  ಈ ಪ್ರಕರಣದಲ್ಲಿ ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಕೋರುವುದು ಅಥವಾ ತಮ್ಮನ್ನು ಕೆಲಸದಿಂದ ವಜಾ ಮಾಡಿರುವ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದು. 

ವೆಬ್ದುನಿಯಾವನ್ನು ಓದಿ