ಮೋದಿ ಹತ್ಯೆ ಸಂಚು ಹಿನ್ನೆಲೆ: ಬಿಗಿ ಭದ್ರತೆ

ಶನಿವಾರ, 25 ಜುಲೈ 2015 (10:51 IST)
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಿಹಾರ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರ ಮೇಲೆ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮಾನವ ಆತ್ಮಾಹುತಿ ಬಾಂಬ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಇಂದು ಪಾಟ್ನಾ ಮತ್ತು ಮುಝಪ್ಫರ್‌ನಗರಕ್ಕೆ ಮೋದಿಯವರು ಭೇಟಿ ನೀಡುತ್ತಿದ್ದು ಈ ಸಂದರ್ಭದಲ್ಲಿ ಅವರ ಮೇಲೆ ದಾಳಿಯಾಗುವ ಸಂಭವವಿದೆ ಎಂದು ತಿಳಿದು ಬಂದಿದೆ. ಪಾಟ್ನಾದಲ್ಲಿ  ಇಂದು ಮೋದಿಯವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ರಾಷ್ಟ್ರೀಯ ಗ್ರಾಮೀಣ ಜ್ಯೋತಿ ಯೋಜನೆಗೆ ಚಾಲನೆ, ಪಟನಾ ಐಐಟಿಯ ಹೊಸ ಕ್ಯಾಂಪಸ್‌ ಉದ್ಘಾಟನೆ ಮಾಡಲಿರುವ ಮೋದಿ ಎರಡು ಹೊಸ ರೈಲು ಮಾರ್ಗಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಮುಜಫ್ಫರ್‌ಪುರಕ್ಕೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
 
ಮಾವೋವಾದಿ ನಕ್ಸಲ್‌ ಮಹಿಳೆ ಪತ್ರಕರ್ತೆ, ಪೊಲೀಸ್‌, ಎಲೆಕ್ಟ್ರಿಷಿಯನ್‌, ಸಂಘಟಕಿ ಅಥವಾ ಕೂಲಿ ಹೀಗೆ ಯಾವುದಾದರೂ ಮಾರು ವೇಷದಲ್ಲಿ ಬಂದು ಮೋದಿ ಎದುರು ಆತ್ಮಾಹುತಿ ಮಾಡಿಕೊಳ್ಳಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. 

ಸಂಭಾವ್ಯ ದಾಳಿ ಭೀತಿ ಹಿನ್ನೆಲೆಯಲ್ಲಿ ಎಸ್​ಪಿಜಿ ಯೋಧರು ಈಗಾಗಲೇ ಪಾಟ್ನಾ ಮತ್ತು  ಮುಝಪ್ಫರ್‌ನಗರದಲ್ಲಿ ಬೀಡುಬಿಟ್ಟಿದ್ದು, ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಮೋದಿ ಭದ್ರತೆಗಾಗಿ ಬಿಹಾರ ಸರ್ಕಾರವೂ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಿದ್ದು, ಎಸ್​ಪಿಜಿ ಜತೆಗೂಡಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.
 
 1991ರಲ್ಲಿ ಎಲ್‌ಟಿಟಿಇ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಗೈದಿದ್ದರು. 

ವೆಬ್ದುನಿಯಾವನ್ನು ಓದಿ