ಚುನಾವಣೆಯಲ್ಲಿ ಎಷ್ಟು ಕಪ್ಪು ಹಣ ಬಳಸಿದೆ ಎನ್ನುವುದನ್ನು ಬಿಜೆಪಿ ಬಹಿರಂಗಪಡಿಸಲಿ: ತೃಣಮೂಲ ಕಾಂಗ್ರೆಸ್

ಸೋಮವಾರ, 24 ನವೆಂಬರ್ 2014 (16:04 IST)
ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಮ್ಮ ಪಕ್ಷದ ಕೆಲ ನಾಯಕರು ಶಾಮೀಲಾಗಿರುವ ಬಗ್ಗೆ  ಪಕ್ಷ ಮತ್ತು ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ವಿರೋಧ ಪಕ್ಷಗಳಿಂದ ತೀವೃ ವಾಗ್ದಾಳಿಗಳನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಕೇಂದ್ರ ಸಚಿವ ಅರುಣ್ ಜೇಟ್ಲಿ  ವಿರುದ್ಧ ಪ್ರತಿ ದಾಳಿ ನಡೆಸಿದೆ. 

"ಚುನಾವಣೆ ಸಂದರ್ಭದಲ್ಲಿ ಅದ್ದೂರಿ ಖರ್ಚು ನಡೆಸುವ ಬಿಜೆಪಿಗೆ, ಆ ಪ್ರಮಾಣದ ಹಣ ಎಲ್ಲಿಂದ ಬರುತ್ತದೆ. ಈ ಕುರಿತು ಅವರು ಪಾರದರ್ಶಕ ಬ್ಯಾಂಕ್ ಖಾತೆಗಳನ್ನು ಯಾಕೆ ಸಾದರ ಪಡಿಸುತ್ತಿಲ್ಲ," ಎಂದು ಟಿಎಂಸಿ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಡೆರೆಕ್ ಒ ಪ್ರಶ್ನಿಸಿದ್ದಾರೆ.
 
ನಾಳೆಯಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಬಿಜೆಪಿ ಚುನಾವಣಾ ವೆಚ್ಚಗಳಿಗಾಗಿ ಕಪ್ಪು ಹಣವನ್ನು ಬಳಸಿ ಕೊಂಡಿದೆ ಎಂದು ಆರೋಪಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ಕೈಗೊಳ್ಳುವುದಾಗಿ ಪಕ್ಷ ಈಗಾಗಲೇ ಘೋಷಿಸಿದೆ.
 
"ಚುನಾವಣಾ ಪ್ರಚಾರಕ್ಕೆ ಬಿಜೆಪಿ ಎಷ್ಟು ಹಣ ಸುರಿದಿದೆ ಎಂದು ದೇಶದ ಜನತೆಗೆ ತಿಳಿದು ಬಂದಾಗ, ಅದನ್ನು ಬ್ಲಾಕ್ ಲಿಸ್ಟೆಡ್ ಪಕ್ಷವಾಗಿಸಿ ಮೂಲೆಗುಂಪು ಮಾಡಲಿದ್ದಾರೆ" ಎಂದು ಅವರು ಭವಿಷ್ಯ ನುಡಿದಿದ್ದಾರೆ.
 
'ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಸಹಾನುಭೂತಿ ಮನೋಭಾವ ಹೊಂದಿದ್ದಾರೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಅವರ ಮೇಲೆ  ಡೆರೆಕ್ ಒ ಆರೋಪ ಹೊರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ