ಮೋದಿ ಮೌನ ಮುರಿಯದಿದ್ದರೆ ಜನರು ರಾಜೀನಾಮೆ ಕೇಳುತ್ತಾರೆ: ಕಾಂಗ್ರೆಸ್

ಸೋಮವಾರ, 29 ಜೂನ್ 2015 (17:22 IST)
ಲಲಿತ್ ಮೋದಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನ ಮುರಿಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.
 
ತಮ್ಮ ಮಾಸಿಕ ರೇಡಿಯೋ ಭಾಷಣ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿಯವರು ಈ ವಿಷಯದ ಪ್ರಸ್ತಾಪ ಮಾಡದಿರುವುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ಕೆರಳಿಸಿದ್ದು, ಲಲಿತ್ ಗೇಟ್ ಪ್ರಕರಣದ ಕುರಿತಾಗಿ ಬಿಜೆಪಿ ವರಿಷ್ಠ  ಆಡ್ವಾಣಿ ನೀಡಿರುವ ಹೇಳಿಕೆ ಕೂಡ ಮೋದಿ ವಿರುದ್ಧ ಚಾಟಿ ಬೀಸಲು ಹೆಚ್ಚಿನ ಅವಕಾಶವನ್ನು ಕಲ್ಪಿಸಿದೆ. 
 
ಕಳಂಕಿತರ ವಿರುದ್ಧ ಕ್ರಮ ಕೈಗೊಳ್ಳುವುದು ಪ್ರಧಾನಿ ಜವಾಬ್ದಾರಿ.  ಅವರು ತಮ್ಮ ಮೌನವನ್ನು ಮುರಿಯದಿದ್ದರೆ, ಜನರು ಅವರ ರಾಜೀನಾಮೆಯನ್ನು ಕೇಳಲು ಪ್ರಾರಂಭಿಸುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಎಚ್ಚರಿಕೆ ನೀಡಿದ್ದಾರೆ.
 
ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರಿಗೆ ನೆರವು ನೀಡಿದ ಆರೋಪಗಳನ್ನೆದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜಿನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದು ಕುಳಿತಿವೆ. ಬಿಜೆಪಿ ಇವರಿಬ್ಬರನ್ನು ಸಮರ್ಥಿಸಿಕೊಂಡಿದ್ದರೆ ಕಾಂಗ್ರೆಸ್ ಪ್ರಧಾನಿ ಮೋದಿ ಈ ಕುರಿತು ಮೌನವನ್ನು ಕಾಯ್ದುಕೊಂಡಿರುವುದನ್ನು ಪ್ರಶ್ನಿಸುತ್ತಿದೆ. 
 
ಆಮ್ ಆದ್ಮಿ , ಎಡ ಪಕ್ಷಗಳು ಮತ್ತು ಸಂಯುಕ್ತ ಜನತಾ ದಳ ಪಕ್ಷಗಳು ಕೂಡ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿವೆ. ಅವರೇಕೆ ಸುಮ್ಮನಿದ್ದಾರೆ? ಯಾರನ್ನು ರಕ್ಷಿಸುತ್ತಿದ್ದಾರೆ ಎಂದು ಸಿಪಿಐ ನಾಯಕ ಡಿ. ರಾಜಾ  ಪ್ರಶ್ನಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ