ಬಿಹಾರವನ್ನು ಕೊಳ್ಳೆ ಹೊಡೆಯಲು ಮಹಾಮೈತ್ರಿ: ಮೋದಿ

ಗುರುವಾರ, 8 ಅಕ್ಟೋಬರ್ 2015 (16:10 IST)
ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾವು ಪಡೆಯುತ್ತಿದ್ದು, ಇಂದು ಪ್ರಧಾನಿ ಮೋದಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಆರಂಭಿಸಿದ್ದಾರೆ. 
ಮುಂಗರ್‌ನಲ್ಲಿ ತಮ್ಮ ಪ್ರಥಮ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ,"ಬಿಹಾರವನ್ನು ಕೊಳ್ಳೆ ಹೊಡೆಯಲು ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, ಸ್ವಾರ್ಥಕ್ಕಾಗಿ ಒಂದಾಗಿವೆ. ಕಾಂಗ್ರೆಸ್ ಬಿಹಾರವನ್ನು 25 ವರ್ಷಗಳ ಕಾಲ ಲೂಟಿ ಮಾಡಿದೆ. ಲಾಲು- ನಿತೀಶ್ ಸಹ 25 ವರ್ಷಗಳ ಆಡಳಿತದಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಮತ್ತೆ ರಾಜ್ಯವನ್ನು ಲೂಟಿ ಮಾಡಲು ಅವಕಾಶ ನೀಡುತ್ತೀರಾ?",ಎಂದು ಮೋದಿ ಬಿಹಾರದ ಜನತೆಯನ್ನು ಪ್ರಶ್ನಿಸಿದ್ದಾರೆ.
 
'ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ನಡೆಯುತ್ತಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕಿ ಎಂದ ಮೋದಿ, ಬಿಹಾರದಲ್ಲಿ ವಿಕಾಸ್ ರಾಜ್ ಬೇಕೋ ಅಥವಾ ಜಂಗಲ್ ರಾಜ್ ಬೇಕೋ ಎಂಬುದನ್ನು ನಿರ್ಧರಿಸಿ', ಎಂದಿದ್ದಾರೆ.
 
ಮಾತಿನ ನಡುವೆ ಜಯಪ್ರಕಾಶ್ ನಾರಾಯಣ್ ಅವರನ್ನು ನೆನಪಿಸಿಕೊಂಡ ಮೋದಿಯವರು, 'ಜೆಪಿ ಸದಾ ನನಗೆ ಪ್ರೇರಣೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸಂಪೂರ್ಣ ದೇಶವನ್ನೇ ಜೈಲಾಗಿಸಿತ್ತು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ್ದ ಜಯಪ್ರಕಾಶ್ ನಾರಾಯಣ್ ಅವರನ್ನು ಕಾಂಗ್ರೆಸ್ ಜೈಲಿಗಟ್ಟಿತ್ತು.   ಆದರೆ ಜನತಾ ಪರಿವಾರದ ನಾಯಕರು ಇಂದು ಅಧಿಕಾರಕ್ಕಾಗಿ ತಮ್ಮ ನಾಯಕನನ್ನೇ ಜೈಲಿಗೆ ಕಳಿಸಿದ್ದ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದಾರೆ,' ಎಂದು ಮೋದಿ ಟೀಕಿಸಿದ್ದಾರೆ.
 
'ಬಿಜೆಪಿ ಮೈತ್ರಿಕೂಟಕ್ಕೆ ಬಹುಮತದಿಂದ ಗೆಲ್ಲಿಸಿ. ಈ ಮೂಲಕ ಬಿಹಾರದ ಭವಿಷ್ಯ ಬದಲಾಗಲಿದೆ. ಗುಜರಾತ್‌ನಲ್ಲಿ ಹಲವಾರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಇಷ್ಟು ಸಂಖ್ಯೆಯಲ್ಲಿ ಜನರು ಎಂದಿಗೂ ಸೇರಿರಲಿಲ್ಲ. ಇದು ಬಿಜೆಪಿ ಗೆಲುವು ಸ್ಪಷ್ಟ ಎಂದು ಹೇಳುತ್ತಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ ಬದಲಾಗಲಿದೆ. ನಾವು ಬಿಹಾರದಲ್ಲಿ ಗೆಲುವು ಸಾಧಿಸಲಿದ್ದೇವೆ', ಎಂದು ಮೋದಿ ಆಶಾವಾದವನ್ನು ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ