ನಪಾಸು ಮಾಡಿದರೆ ನಿಮ್ಮ ಕುಟುಂಬವನ್ನು ಸಾಯಿಸುತ್ತೇನೆ: ಉತ್ತರದ ಬದಲು ಬೆದರಿಕೆ

ಭಾನುವಾರ, 3 ಮೇ 2015 (16:50 IST)
“ಪರೀಕ್ಷೆಯಲ್ಲಿ ನೀವು ನನ್ನನ್ನು ಅನುತ್ತೀರ್ಣಗೊಳಿಸಿದರೆ ನಿಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ಎಲ್ಲರೂ ಸಾಯುವ ಹಾಗೆ ಮಾಡುತ್ತೇನೆ", ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರಿಗೆ ಬೆದರಿಕೆ ಹಾಕಿದ್ದಾನೆ. 

ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರೊಬ್ಬರು ಗಣಿತ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದ ಈ ಬೆದರಿಕೆಯ ಬರವಣಿಗೆಯನ್ನು ವಾಟ್ಸ್‌ಆಪ್ ಮೂಲಕ  ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಅವರಿಗೆ ಕಳುಹಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸುದ್ದಿಯನ್ನು ಯಶೋಧಾ ಬೋಪಣ್ಣ ಅವರೇ ಮಾಧ್ಯಮದವರಿಗೆ ಬಹಿರಂಗ ಪಡಿಸಿದ್ದಾರೆ.
 
ಇತ್ತೀಚಿನ ಕೆಲವು ವರ್ಷಗಳಲ್ಲಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯದ ವಿದ್ಯಾರ್ಥಿಗಳು ನಪಾಸಾಗುವ ಭಯದಿಂದ ಉತ್ತರ ಪತ್ರಿಕೆಗಳಲ್ಲಿ  ಮೌಲ್ಯಮಾಪಕರಿಗೆ ಬೆದರಿಕೆ, ಒತ್ತಡ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಯಶೋಧಾರವರು ಆತಂಕ ವ್ಯಕ್ತ ಪಡಿಸಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ