ಅಕ್ರಮ ಸಂಬಂಧದ ಅಪಪ್ರಚಾರ: ಕುಮಾರ್ ವಿಶ್ವಾಸ್‌ಗೆ ನೋಟಿಸ್

ಸೋಮವಾರ, 4 ಮೇ 2015 (12:34 IST)
ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರು ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಎಪಿ ಕಾರ್ಯಕರ್ತೆ, ವಿವಾಹಿತ ಮಹಿಳೆಯೋರ್ವರು ದೆಹಲಿ ಮಹಿಳಾ ಆಯೋಗಕ್ಕೆ ಇಂದು ದೂರು ಸಲ್ಲಿಸಿದ್ದಾರೆ.

ಮಹಿಳೆಯು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಕುಮಾರ್ ವಿಶ್ವಾಸ್ ಹಾಗೂ ಸಿಎಂ ಕೇಜ್ರಿವಾಲ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದು, ತಮ್ಮೊಂದಿಗೆ ಕುಮಾರ್ ವಿಶ್ವಾಸ್ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಪತಿ ಮನೆ ತೊರೆದಿದ್ದು, ನನ್ನನ್ನು ಕೈ ಬಿಟ್ಟಿದ್ದಾರೆ. ಆದ್ದರಿಂದ ಎರಡು ಮಕ್ಕಳ ತಾಯಿಯಾದ ನಾನು ಬೀದಿಗೆ ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರ್ ವಿಶ್ವಾಸ್ ಅವರಿಂದ ಸೂಕ್ತ ಉತ್ತರವನ್ನು ಬಯಸುತ್ತೇನೆ ಎಂದಿದ್ದಾರೆ.

ದೂರು ನೀಡಿರುವ ಮಹಿಳೆಯ ಹೆಸರನ್ನು ಬಹಿರಂಗಗೊಳಿಸಿಲ್ಲ. ಆದರೆ ಆಕೆ ಉತ್ತರ ಪ್ರದೇಶದ ಅಮೇಥಿ ಮೂಲದವರು ಎಂದು ಹೇಳಲಾಗಿದ್ದು, ಎಎಪಿ ಪಕ್ಷದ ಕಾರ್ಯಕರ್ತೆಯೂ ಆಗಿದ್ದಾರೆ.

ಇನ್ನು ದೂರಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೂ ಕೂಡ ಉಲ್ಲೇಖಿಸಿರುವ ಮಹಿಳೆ, ಈ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಸಿಎಂ ಅವರಿಗೂ ಕೂಡ ಕಳೆದ ಏಪ್ರಿಲ್ 30ರಂದೇ ಪತ್ರ ಬರೆದು ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಆದರೆ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಯೋಗದ ಅಧ್ಕ್ಯಕ್ಷೆ ಬಾರ್ಖಾ ಶುಕ್ಲಾ ಸಿಂಗ್ ಅವರು ನಾಯಕ ಕುಮಾರ್ ವಿಶ್ವಾಸ್ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಖಡಕ್ಕಾಗಿ ಸೂಚಿಸಿದ್ದಾರೆ.

ಇದೇ ವೇಳೆ, ಸಿಎಂ ಕೇಜ್ರಿವಾಲ್ ಅವರಿಗೆ ಕಾರ್ಯಕರ್ತೆ ನೀಡಿರುವ ದೂರಿನ ಪ್ರತಿಯನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.      

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರ್ ವಿಶ್ವಾಸ್, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಆಯೋಗದಿಂದ ನನಗೆ ನೋಟಿಸ್ ತಲುಪಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ