ಮಹಾದೇವನ ಮಂದಿರದಲ್ಲಿ ಮೋದಿಯ ಮೂರ್ತಿ: ದಿನಂಪ್ರತಿ ಪೂಜೆ, ಮಂತ್ರ ಪಠನ

ಶುಕ್ರವಾರ, 19 ಡಿಸೆಂಬರ್ 2014 (11:45 IST)
ಹರ್ ಹರ್ ಮೋದಿ.. ಹರ್ ಹರ್ ಮೋದಿ ಎಂಬ ಘೋಷಣೆ ಚುನಾವಣೆ ಸಂದರ್ಭದಲ್ಲಿ ಮುಗಿಲು ಮುಟ್ಟಿತ್ತು. ಆದರೆ ಈ ಪುಟ್ಟ ಹಳ್ಳಿಯ ಜನ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರು ಹರನ ಪಕ್ಕದಲ್ಲಿ ಪ್ರಧಾನಿ ಮೋದಿಯನ್ನಿಟ್ಟು ಪೂಜಿಸತೊಡಗಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಭಗವಾನ್‌ಪುರ ಎಂಬ ಹಳ್ಳಿ ವಿಶೇಷ ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಮೋದಿಯನ್ನು ಅತಿಯಾಗಿ ಇಷ್ಟ ಪಡುವ ಗ್ರಾಮವಾಸಿಗಳು 300 ವರ್ಷ ಹಳೆಯ ಶಿವನ ದೇವಸ್ಥಾನದಲ್ಲಿ ಮೋದಿಯವರ ಮೂರ್ತಿಯನ್ನು ಸಹ ಇಟ್ಟು ಪೂಜೆಗೈಯ್ಯುತ್ತಿದ್ದಾರೆ.
 
ಅರ್ಧ ತೋಳಿನ ಕುರ್ತಾ, ಅರ್ಧ ಜಾಕೆಟ್, ಅವರದೇ ಕೂದಲು ಹಾಗೂ ಗಡ್ಡದ ಶೈಲಿಯ, ಕುಳಿತಿರುವ ಭಂಗಿಯಲ್ಲಿರುವ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಿವಲಿಂಗದ ಹಿಂದೆ ಮೋದಿ ಮೂರ್ತಿಯನ್ನು ಇಡಲಾಗಿದ್ದು, ಪ್ರಧಾನಿ ಮೋದಿಯವರಿಗೆ ದೇವರು ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ನೀಡಲಿ ಎಂದು ಎಲ್ಲರು ಪ್ರಾರ್ಥಿಸುತ್ತಾರೆ.
 
ಈ ಮೊದಲು ಶಿವ ಮಂದಿರ ಎಂದು ಕರೆಸಿಕೊಳ್ಳುತ್ತಿದ್ದ ಈ ದೇವಾಲಯ ಈಗ ನಮೋ 'ನಮೋ ಮಂದಿರ' ಎಂದು ಕರೆಯಲ್ಪಡುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಶಿವನ ಜತೆ ಮೋದಿಗೂ ಪೂಜೆ ಮಾಡಲಾಗುತ್ತದೆ. ಭಜನೆಯನ್ನು ಕೂಡ ಹಾಡಲಾಗುತ್ತದೆ, ಮೋದಿ ಚಾಲಿಸ್ ಮಂತ್ರವನ್ನು ಪಠಣೆ ಮಾಡಲಾಗುತ್ತಿದೆ. 'ಜೈಮೋದಿ ರಾಜಾ,,, ತೇರೆ ನಾಮ್ ಕಾ ದೇಶ್ ಮೇ ಡಂಕಾ ಭಜಾ' ಎಂಬ ಭಜನೆಯನ್ನು ಮೋದಿಗೆ ಆರತಿ ಎತ್ತುವ ಸಂದರ್ಭದಲ್ಲಿ ಹಾಡಲಾಗುತ್ತದೆ.
 
ವಿಶ್ವ ಹಿಂದೂ ಪರಿಷದ್ ನಾಯಕ  ಪಂಡಿತ್ ಬ್ರಿಜೇಂದ್ರ ನಾರಾಯಣ್ ಮಿಶ್ರಾ ದೇಗುಲದ ಪ್ರಧಾನ ಅರ್ಚಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ