ಪ್ರಧಾನಿ ಮೋದಿ ಆ ಅಜ್ಜಿಯ ಪಾದಕ್ಕೆ ಎರಗಿದ್ಯಾಕೆ?

ಸೋಮವಾರ, 22 ಫೆಬ್ರವರಿ 2016 (12:56 IST)
104 ವರ್ಷದ ಅಜ್ಜಿಯೊಬ್ಬಳು ಮಾಡಿರುವ ಮಹಾತ್ ಕಾರ್ಯವೊಂದು ಪ್ರಧಾನಿ ಮೋದಿಯವರನ್ನು ಸಹ ಪ್ರಭಾವಿತಗೊಳಿಸಿತು. ಆಕೆಯನ್ನು ಕಂಡಾಗ ಪ್ರಧಾನಿ ಮೊದಲು ಮಾಡಿದ್ದು  ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದು. ಅಷ್ಟಕ್ಕೂ ಆ ಅಜ್ಜಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಅಷ್ಟು ಗೌರವವೇಕೆ ಎನ್ನುತ್ತೀರಾ? ಅದನ್ನು ತಿಳಿಯಲು ಮುಂದೆ ಓದಿ. 

ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರಭಾವಿತಳಾಗಿದ್ದ ಛತ್ತೀಸ್‍ಗಢದ ಧಮ್‍ತಾರಿ ಜಿಲ್ಲೆಯ ಗ್ರಾಮವೊಂದರ ಅಜ್ಜಿ ಕುಂವರ್ ಬಾಯಿ ಮನೆಯಲ್ಲಿ ಶೌಚಾಲಯ ನಿರ್ಮಿಸಲೆಂದು  ತನ್ನ ಬಳಿಯಿದ್ದ ಮೇಕೆಗಳನ್ನೇ ಮಾರಾಟ ಮಾಡಿದ್ದಾಳೆ. ಆ ಮೂಲಕ ನೈರ್ಮಲ್ಯದ ಮಹತ್ವವನ್ನು ಸಾರಿದ್ದಾಳೆ. 
 
ಛತ್ತೀಸ್‍ಗಢದ ನಕ್ಸಲ್ ಪೀಡಿತ ರಾಜಂಡ್‍ಗಾಂವ್‍ನಲ್ಲಿ ನಿನ್ನೆ  ಸ್ಮಾರ್ಟ್ ಹಳ್ಳಿಗಳ ರರ್ಬನ್ ಮಿಷನ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ,  ಕಾರ್ಯಕ್ರಮದಲ್ಲಿ ಹಾಜರಿದ್ದ 104ರ ಅಜ್ಜಿಯ ಸಾಧನೆ ತಿಳಿದು ಖುಷಿ ಪಟ್ಟಿದ್ದಲ್ಲದೆ ಆಕೆಯ ಕಾಲಿಗೆರಗಿ ಆರ್ಶಿವಾದ ಪಡೆದರು. 
 
ಆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ತನ್ನ ಗ್ರಾಮವನ್ನು ಬಯಲು ಶೌಚ ಮುಕ್ತಗೊಳಿಸುವಲ್ಲಿ ಅಜ್ಜಿ ಮಾಡಿರುವ ಕಾರ್ಯ ಭಾರತ ಬದಲಾಗುತ್ತಿರುವುದಕ್ಕೆ ಸಂಕೇತ ಎಂದು ಹೇಳಿದ್ದಾರೆ. 
 
ಅಜ್ಜಿ ಟಿವಿ ನೋಡುವುದಿಲ್ಲ. ಪತ್ರಿಕೆ ಓದಲು ಬರುವುದಿಲ್ಲ. ಆದರೆ ಸ್ವಚ್ಛಭಾರತ ಅಭಿಯಾನದ ವಿಚಾರ ಅಜ್ಜಿಗೆ ಹೇಗೋ ತಿಳಿಯಿತು. ಅದರಿಂದ ಪ್ರಭಾವಿತಳಾದ ಅವಳು ತನ್ನ ನಿವಾಸದಲ್ಲಿ ಶೌಚಾಲಯ ನಿರ್ಮಿಸಲು 8-10 ಕುರಿಗಳನ್ನು ಮಾರಿದ್ದಾಳೆ. ಅಷ್ಟೇ ಅಲ್ಲದೆ ತಮ್ಮ ಗ್ರಾಮವಾಸಿಗಳಲ್ಲಿ  ನೀವು ಕೂಡ ಶೌಚಾಲಯ ನಿರ್ಮಿಸಿ ಎಂದು ನೈರ್ಮಲ್ಯದ ಅರಿವು ಮೂಡಿಸಿದ್ದಾಳೆ. 
 
ಇದರಿಂದ ಎಚ್ಚೆತ್ತ ಈ ಗ್ರಾಮದ ಎಲ್ಲಾ ಮನೆಯಲ್ಲಿ ಟಾಯ್ಲೆಟ್ ನಿರ್ಮಾಣವಾಗಿದೆ. ದೇಶದ ಯಾವುದೋ ಮೂಲೆಯಲ್ಲಿರುವ ಈ ಅಜ್ಜಿಯ ಕೆಲಸ ಎಲ್ಲರಿಗೂ ಪ್ರೇರಣೆಯಾಗಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
 
ನನ್ನ ಬಗ್ಗೆ ನೀವು ಸುದ್ದಿ ಮಾಡದಿದ್ದರೂ ಸರಿ. ಆದರೆ ಈ ಅಜ್ಜಿಯ ಕತೆಯನ್ನು ಎಲ್ಲರಿಗೂ ತಲುಪಿಸಿ ಎಂದು ಮೋದಿ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ