ತಮ್ಮ ಕೊನೆಯ ಪ್ರಚಾರ ಭಾಷಣದಲ್ಲಿ ಮೋದಿ ಹೇಳಿದ್ದೇನು?

ಶನಿವಾರ, 10 ಮೇ 2014 (19:44 IST)
2014 ರ ಲೋಕಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಬಿಡುವಿಲ್ಲದೇ ದೇಶಾದ್ಯಂತ ಸಂಚರಿಸಿ ತಮ್ಮ ಪಕ್ಷದ ಗೆಲುವಿಗೆ ಪ್ರತಿದಿನವನ್ನು ಮುಡಿಪಿಟ್ಟ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಂದು ತಮ್ಮ ಕೊನೆಯ ಪ್ರಚಾರ ಭಾಷಣವನ್ನು ಮಾಡಿದರು. 
 
ಮೇ 12 ಸೋಮವಾರದಂದು ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದೆ. ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ವಾರಣಾಸಿಯು ಸೇರಿದಂತೆ ದೇಶದ 64 ಕ್ಷೇತ್ರಗಳಲ್ಲಿ 9ನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. 
 
ಬಲಿಯಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೀಗೆ ಹೇಳಿದರು. 
 
* ಉದಮ್‌ಪುರದಲ್ಲಿ ವೈಷ್ಣೋದೇವಿಯ ಆಶೀರ್ವಾದವನ್ನು ಪಡೆದುಕೊಂಡು ನಾನು ಪ್ರಚಾರ   ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆ ಮತ್ತು ಬಲಿಯಾದಲ್ಲಿ ಇದನ್ನು ಕೊನೆಗೊಳಿಸುತ್ತಿದ್ದೇನೆ.
 
* ಚುನಾವಣಾ ಪ್ರಚಾರಕ್ಕಾಗಿ ನಾನು 3 ಲಕ್ಷ ಕೀಮಿ ಕ್ರಮಿಸಿದ್ದೇನೆ
 
* ನಾನಿಲ್ಲಿ ಮತವನ್ನು ಯಾಚಿಸಲು ಬಂದಿಲ್ಲ.ನೀವು ನನಗೆ ಬೆಂಬಲ ನೀಡುತ್ತಿರೆಂದು ನನಗೆ ಗೊತ್ತು. 
 
* ಬಲಿಯಾದಿಂದ ಸ್ವರಾಜ್ಯದ ಆಂದೋಲನ ಪ್ರಾರಂಭವಾಯಿತು. ಈಗ ಸುರಾಜ್ಯದ ಆಂದೋಲನವು ಕೂಡ ಇಲ್ಲಿಂದಲೇ ಪ್ರಾರಂಭವಾಗ ಬೇಕಿದೆ. 
 
ಉತ್ತರಪ್ರದೇಶದ ಕುಶೀನಗರದಲ್ಲಿ ಮೋದಿ ಮಾತುಗಳು ಈ ಮುಂದಿನಂತಿದ್ದವು. 
 
* ಮತದಾನ ಮಾಡುವಂತೆ ಜನರಲ್ಲಿ ವಿನಂತಿಸಿಕೊಂಡ ಅವರು ಮೊದಲು ಮತದಾನ , ನಂತರ ಜಲಪಾನ ಎಂದರು.
 
* ಉತ್ತರಪ್ರದೇಶದಲ್ಲಿ ನಿಮಗೆ ಉತ್ತಮ ವ್ಯವಸ್ಥೆ ಬೇಕೆಂದಿದ್ದರೆ, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿ. 
 
* ದೆಹಲಿ ಅತ್ಯಾಚಾರದ ನಗರಿಯಾಗಿ ಪರಿವರ್ತಿತವಾಗಿದೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೆಹಲಿಯ ಬಾಗಿಲು ಮುಚ್ಚಿ ಹೋಗಿದೆ. 
 
* ಮೇಡಂ ಸೋನಿಯಾರವರೇ ರೈತರ ಬಗ್ಗೆ ಯೋಚಿಸುವುದು ನೀಚ ಯೋಚನೆಯಾದರೆ, ನನಗೆ ಈ ನೀಚ ಯೋಚನೆ ಒಪ್ಪಿಗೆಯಾಗಿದೆ. 
 
* ನಾನು ಕೀಳುಮಟ್ಟದಲ್ಲಿ ಯೋಚಿಸುತ್ತೇನೆ ಎಂದು ನೀವು ಹೇಳುತ್ತಿರಿ. ನವಯುವಕರಿಗೆ ಉದ್ಯೋಗ ಸಿಗಬೇಕು, ಎಲ್ಲರಿಗೂ ಆಹಾರ ಸಿಗಬೇಕು, ತಾಯಂದಿರಿಗೆ, ಸಹೋದರಿಯರಿಗೆ ಗೌರವ ಸಿಗಬೇಕು ಎಂದರೆ ಅದು ನೀಚ ಯೋಚನೆಯೇ?
 
* ನಾಲ್ಕನೇ ಬಾರಿ ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯಾಗಿದ್ದೇನೆ. 10 ವರ್ಷಗಳಿಂದ ನಿಮ್ಮ ಸರಕಾರವಿದೆ.  ಮೋದಿಯ ಜೀವನವನ್ನು ದುಸ್ತರಗೊಳಿಸಲು ನೀವು ಕುತಂತ್ರ ಮಾಡದೇ ಒಂದು ದಿನವನ್ನು ನಾನು ಕಂಡಿಲ್ಲ. 
 
* ಮೋದಿ ಪ್ರಧಾನಿಯಾದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಲತಾ ಮಂಗೇಶ್ಕರ್ ಹೇಳಿದ್ದರು. ಅವರ ಈ ಮಾತಿಗೆ ನೀವು ಲತಾಜೀಗೆ ಕೊಡಮಾಡಲ್ಪಟ್ಟ ಭಾರತರತ್ನವನ್ನು ವಾಪಸ್ ಪಡೆಯ ಹೊರಟ್ಟಿದ್ದಿರಿ. 
 
* ಅಮ್ಮ-ಮಗನ ಸರಕಾರ ಪ್ರತಿದಿನ ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನದಲ್ಲೇ ಇತ್ತು. 
 
*ರಾಜೀವ್ ಗಾಂಧಿ ಫೌಂಡೇಶನ್ ಗುಜರಾತ್ ವಿಕಾಶ ಸರ್ವಶ್ರೇಷ್ಠ ಎಂದು ಹೇಳಿದೆ. ಆ ಸಂಸ್ಥೆಯ ಅಧ್ಯಕ್ಷರು ಸ್ವತಃ ಸೋನಿಯಾ.
 
* ಸಮರ್ಪಕ ವರದಿಯನ್ನು ನೀಡಿದ ಅರ್ಥಶಾಸ್ತ್ರಜ್ಞರನ್ನು ಒಂದು ವಾರದ ಒಳಗೆ ಸೋನಿಯಾರವರು ರಾಜೀವ್ ಗಾಂಧಿ ಸಂಸ್ಥೆಯಿಂದ ಹೊರಹಾಕಿದರು. 
 
* ಮೇಡಂ ಸೋನಿಯಾರವರೇ ಗಮನವಿಟ್ಟು ಕೇಳಿ, ನೀವು ಮತ್ತು ನಿಮ್ಮ ಮಗ  ಎಷ್ಟೇ ಕೆಸರನ್ನು ಎರಚಿದರೂ, ಕಮಲ ಮತ್ತಷ್ಟು ಅರಳಲಿದೆ.
 
* ಬಿಜೆಪಿ ಸರಕಾರ ಸ್ಥಾಪನೆಯಾದ ನಂತರ ರೈತರ ಹೊಲಗದ್ದೆಗಳಲ್ಲಿ ನೀರು ತಲುಪಲು ಯೋಜನೆಯನ್ನು ರೂಪಿಸಲಿದೆ. 
 
* ಯುಪಿಯಲ್ಲಿ ಕಾನೂನು ವ್ಯವಸ್ಥೆ ಎಂಬ ಹೆಸರಿನಲ್ಲಿ ಏನೂ ಅಸ್ತಿತ್ವದಲ್ಲಿಲ್ಲ. ಅಪ್ಪ-ಮಗನ ಸರಕಾರದಿಂದ ಅಪರಾಧ ವೃದ್ಧಿಯಾಗಿದೆ. 
 
* ಪೂರ್ವ ಪ್ರಧಾನಮಂತ್ರಿ ವಾಜಪೇಯಿ ಗ್ರಾಮಗಳನ್ನು ರಸ್ತೆಗಳಿಂದ ಜೋಡಿಸಿದ ಹಾಗೆ ನನಗೆ ಗದ್ದೆಗಳನ್ನು ನೀರಿನಿಂದ ಜೋಡಿಸ ಬೇಕಿದೆ.  
 
ಉತ್ತರಪ್ರದೇಶದ ವಾರಣಾಸಿ ಮತ್ತು ಗುಜರಾತಿನ ವಡೋದರಾದಿಂದ ಕಣಕ್ಕಿಳಿದಿರುವ ಮೋದಿ ಅಲೆಯಲ್ಲಿ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಅರಳಲಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಅದು ಎಷ್ಟರ ಮಟ್ಟಿಗಿನ ಸತ್ಯ ಎಂದು ಮೇ 16 ರವರೆಗೆ ಕಾದು ನೋಡ ಬೇಕಿದೆ. 

ವೆಬ್ದುನಿಯಾವನ್ನು ಓದಿ