ಭ್ರಷ್ಟಾಚಾರದಲ್ಲಿ ತೊಡಗಿದಲ್ಲಿ ಸೇವೆಯಿಂದ ವಜಾ: ಅಧಿಕಾರಿಗಳಿಗೆ ಕೇಜ್ರಿವಾಲ್ ವಾರ್ನಿಂಗ್

ಮಂಗಳವಾರ, 13 ಅಕ್ಟೋಬರ್ 2015 (18:32 IST)
ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 
 
ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಂಪುಟದ ಸಚಿವರೊಬ್ಬರನ್ನು ವಜಾಗೊಳಿಸಬಹುದಾದರೇ ಅದರಂತೆ, ಅಧಿಕಾರಿಗಳ ವಿರುದ್ಧ ಅದೇ ಮಾನದಂಡ ಅನುಸರಿಸಲಾಗುವುದು. ಎಲ್ಲಾ ಇಲಾಖೆಗಳು ಕೂಡಾ ಭ್ರಷ್ಟಾಚಾರದ ಬಗ್ಗೆ ಶೂನ್ಯ ತಾಳ್ಮೆಯನ್ನು ಹೊಂದಿರಬೇಕು ಎಂದು ಒತ್ತಾಯಿಸಿದರು. 
 
ಎಲ್ಲಾ ವಿಭಾಗಗಳ ಮುಖ್ಯಸ್ಥರ ಸಭೆಯನ್ನು ಈ ಮೊದಲು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನಂತರ ಮುಖ್ಯ ಕಾರ್ಯದರ್ಶಿ ನಡೆಸಿದ್ದರು. ಇದೀಗ ಮೊದಲ ಬಾರಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. 
 
ಭ್ರಷ್ಟಾಚಾರವನ್ನು ನಿಲ್ಲಿಸುವಂತೆ ಕೋರಿ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಕಂಡುಂಬದಲ್ಲಿ ಆಯಾ ಇಲಾಖೆಯ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು. ಕಿರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದಂತೆ ಗಮನಹರಿಸಿ ಎಂದು ಕೇಜ್ರಿವಾಲ್ ಸಲಹೆ ನೀಡಿರುವುದಾಗಿ ಸಿಸೋಡಿಯಾ ತಿಳಿಸಿದ್ದಾರೆ. 
 
ಅಧಿಕಾರಿಗಳ ಭ್ರಷ್ಟಾಚಾರವನ್ನು ಪತ್ತೆ ಹಚ್ಚಲು ಆಮ್ ಆದ್ಮಿ ಪಕ್ಷದಲ್ಲಿಯೇ ಸ್ವಂತ ನೆಟ್‌ವರ್ಕ್ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ