ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರುವ ಸಾಧ್ಯತೆ

ಶುಕ್ರವಾರ, 13 ಜೂನ್ 2014 (18:54 IST)
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂ.ಗಳಿಂದ  5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚೆಯೇ ಈ ಬಗ್ಗೆ ಇಂಗಿತ ನೀಡಿದ್ದರು. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 5 ಲಕ್ಷಗಳಿಗೆ ಏರಿಸುವುದರಿಂದ 30 ದಶಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದರು.

ಕಡಿಮೆ ತೆರಿಗೆ ರಚನೆಯನ್ನು ಪ್ರತಿಪಾದಿಸಿದ ಜೇಟ್ಲಿ, ನೇರ ತೆರಿಗೆಯ ಪ್ರಮಾಣವನ್ನು ತಗ್ಗಿಸಬೇಕು. ಆದಾಯ ತೆರಿಗೆ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ನುಡಿದಿದ್ದರು. ವಾಜಪೇಯಿ ಸರ್ಕಾರ ಬಡ್ಡಿದರವನ್ನು ಶೇ. 7ರಿಂದ 8 ನಡುವೆ ಇರಿಸಿತ್ತು. ಆದರೆ ಯುಪಿಎ ಸರ್ಕಾರ ಬಡ್ಡಿದರವನ್ನು ಶೇ. 13-14ಕ್ಕೆ ಏರಿಸಿದೆ. ಈ ಕಾರಣದಿಂದಾಗಿ ವ್ಯಾಪಾರ, ಉದ್ದಿಮೆ ನಷ್ಟದಲ್ಲಿ ನಡೆಯುತ್ತಿದೆ. ಕೆಲವು ಬಾಗಿಲು ಮುಚ್ಚಿವೆ.

ಉತ್ಪಾದನೆ ದುಬಾರಿಯಾಗಿ ಪರಿಣಮಿಸಿದೆ. ಇದರಿಂದ ಚೀನಾ ಮತ್ತು ಥಾಯ್ಲೆಂಡ್ ರಾಷ್ಟ್ರಗಳು ನಮ್ಮನ್ನು ಹಿಂದಿಕ್ಕಿ ಮುಂದಕ್ಕೆ ಹೋಗಿವೆ ಎಂದಿದ್ದರು. ಆದಾಯ ತೆರಿಗೆ ವಿನಾಯಿತಿ ಮಿತಿಯ ಏರಿಕೆಯಿಂದ ಜನರ ಜೇಬಿನಲ್ಲಿ ಉಳಿತಾಯ ಹಣ ಸೇರಿ ಖರೀದಿ ಹೆಚ್ಚುತ್ತದೆ. ಇದರ ಫಲವಾಗಿ ವ್ಯಾಟ್ ಮತ್ತು ಅಬ್ಕಾರಿ ಸುಂಕ ಏರಿಕೆಯಾಗಿ ಆದಾಯ ಹೆಚ್ಚುತ್ತದೆ ಎಂದು ಜೇಟ್ಲಿ ನುಡಿದಿದ್ದರು. 

ವೆಬ್ದುನಿಯಾವನ್ನು ಓದಿ