ಜಾಗತಿಕ ಆರ್ಥಿಕತೆ ಕುಸಿತದ ಸಂದರ್ಭದಲ್ಲಿ ಭಾರತ ಹೂಡಿಕೆದಾರರಿಗೆ ಸ್ವರ್ಗವಾಗಿತ್ತು: ಪ್ರಧಾನಿ ಮೋದಿ

ಮಂಗಳವಾರ, 6 ಅಕ್ಟೋಬರ್ 2015 (16:13 IST)
ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಭಾರತ ಹೂಡಿಕೆದಾರರಿಗೆ ಸ್ವರ್ಗವಾಗಿ ಪರಿಣಮಿಸಿತ್ತು. ಹೊಸದಾಗಿ ಹೂಡಿಕೆ ಮಾಡುವವರಿಗೆ, ಉದ್ಯಮಿಗಳ ಹಿತವನ್ನು ರಕ್ಷಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
    
ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್, ಬೆಂಗಳೂರಿನಲ್ಲಿ ವಹಿವಾಟು ನಡೆಸುತ್ತಿರುವ ಜರ್ಮನ್ ವಾಹನೋದ್ಯಮ ತಯಾರಿಕೆ ಕಂಪೆನಿಯಾದ ಬಾಷ್ ಸಂಸ್ಥೆಗೆ ಭೇಟಿ ನೀಡಿದರು.  
 
ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಜರ್ಮನಿ ಚಾನ್ಸಲರ್, ಭಾರತದೊಂದಿಗೆ ದ್ವಿಪಕ್ಷೀಯ ಒಪ್ಪಂದ ಕುರಿತಂತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.  
 
ಕಳೆದ ಹಲವು ದಶಕಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಷ್ ಕಂಪೆನಿ ಪ್ರಸಕ್ತ ವರ್ಷಾಂತ್ಯಕ್ಕೆ 650 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ಜರ್ಮನಿಯ ಉನ್ನತ ಮಟ್ಟದ ನಿಯೋಗದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಬಾಷ್ ಕಂಪೆನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಮತ್ತು ಚಾನ್ಸಲರ್ ಮಾರ್ಕೆಲ್, ಕಂಪೆನಿಯ ಸಂಶೋಧನೆ, ಇಂಜಿನಿಯರಿಂಗ್ ಮತ್ತು ವೋಕೇಶನಲ್ ಎಜ್ಯುಕೇಶನ್ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.  
 
ಜರ್ಮನಿ ಚಾನ್ಸಲರ್ ಮಾರ್ಕೆಲ್ ಮಾತನಾಡಿ, ಡಿಜಿಟಲೈಸೇಶನ್, ಮೂಲಸೌಕರ್ಯ, ವಿದ್ಯುತ್ ಸರಬರಾಜು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗಾಗಿ ಸುವರ್ಣಾವಕಾಶಗಳಿವೆ. ಜರ್ಮನಿಯಲ್ಲಿ ವಹಿವಾಟು ಆರಂಭಿಸುವ ಹೂಡಿಕೆದಾರರಿಗೆ ಸದಾ ಸ್ವಾಗತವಿದೆ ಎಂದರು. 

ವೆಬ್ದುನಿಯಾವನ್ನು ಓದಿ