ಕೊನೆಗೂ ಭಾರತದ ಪರಮಾಣು ಬೇಡಿಕೆಗೆ ಹಸಿರು ನಿಶಾನೆ ತೋರಿದ ಅಮೆರಿಕ

ಸೋಮವಾರ, 26 ಜನವರಿ 2015 (11:31 IST)
ಅಣು ದುರಂತವಾದರೆ,ಅಣು ಇಂಧನ ಹಾಗೂ ಯಂತ್ರಗಳನ್ನು ಸರಬರಾಜು ಮಾಡಿದ ವಿದೇಶಿ ಕಂಪೆನಿಯೇ ಹೊಣೆ ಎಂಬ ವಾದದಿಂದ ಭಾರತ ಹಿಂದೆ ಸರಿದಿದೆ.
 
ಅಣು ಘಟಕ ನಿರ್ವಹಿಸುವ ಭಾರತದ ಅಣುಶಕ್ತಿ ನಿಗಮವೇ ದುರಂತದ ಹೊಣೆ ಹೊರಬೇಕು ಎಂಬ ಅಮೆರಿಕದ ಫಾರಿನ್‌ ಪಾಲಿಸಿಯನ್ನು ಭಾರತ ಒಪ್ಪಿದೆ. ಇದಕ್ಕೆ ಸರಕಾರದ ವಿಮಾ ಕಂಪೆನಿ "ಜಿಐಸಿ' ಭಾಗಶಃ ಪರಿಹಾರ ನೀಡುತ್ತದೆ. 
 
ಈ ವಿಮೆಯನ್ನು ವಿದೇಶಿ ಕಂಪೆನಿಯ ಪರವಾಗಿ ಭಾರತದ ಅಣುಶಕ್ತಿ ನಿಗಮ ಖರೀದಿಸುತ್ತದೆ. ಇದರಿಂದ ಭಾರತದೊಡನೆ ವ್ಯವಹಾರ ನಡೆಸಲು ವಿದೇಶಿ ಕಂಪೆನಿಗಳು ಭಯಪಡಬೇಕಾಗಿಲ್ಲ.
 
ಇದಕ್ಕೆ ಪ್ರತಿಯಾಗಿ ಅಮೆರಿಕ ತನ್ನ ಒಂದು ಪಟ್ಟು ಸಡಿಲಿಸಿದೆ. ವಿದೇಶಿ ಕಂಪೆನಿಗಳು ಸರಬರಾಜು ಮಾಡುವ ಅಣು ಇಂಧನದ ಮೇಲೆ ನಿಗಾ ಇಡಲು ಹೋಗುವುದಿಲ್ಲ. ಲೆಕ್ಕ ಕೇಳುವುದಿಲ್ಲ.
 
ಗಣರಾಜ್ಯೋತ್ಸವದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವ ಸಲುವಾಗಿ 3 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭೇಟಿ ಮೊದಲ ದಿನ ಸೂಪರ್‌ಹಿಟ್‌ ಆಗಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರೇ ಶಿಷ್ಟಾಚಾರ ಬದಿಗಿಟ್ಟು ಸ್ವಾಗತಿಸಿದರು. ಬಳಿಕ 6 ವರ್ಷಗಳಿಂದ ಕಗ್ಗಂಟಾಗಿದ್ದ ಅಣುಒಪ್ಪಂದಕ್ಕೆ ಒಬಾಮಾ, ಮೋದಿ ಅಂತಿಮ ಮುದ್ರೆ ಒತ್ತಿದರು. ಇಷ್ಟೇ ಅಲ್ಲದೆ ರಕ್ಷಣಾ ಸಹಕಾರ, ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಒಬಾಮಾ ಅವರು ತನ್ನ ಭಾಷಣದಲ್ಲಿ ಹಿಂದಿ ಬಳಸಿದ್ದು ವಿಶೇಷವಾಗಿತ್ತು. 
 
ಭಾರತ, ಅಮೆರಿಕ ಒಪ್ಪಂದಗಳು
 
ಭಾರತ-ಅಮೆರಿಕದ ಮುಖ್ಯಸ್ಥರ ನಡುವೆ ಇದೇ ಮೊದಲ ಬಾರಿಗೆ ಹಾಟ್‌ಲೈನ್ ಸ್ಥಾಪನೆ
 
ನಾಗರಿಕ ಪರಮಾಣು ಒಪ್ಪಂದ
 
ದ್ವಿಪಕ್ಷೀಯ ಸಂಬಂಧ ವೃದ್ಧಿ, ಮಾತುಕತೆಗಳ ಪುನರಾರಂಭ
 
ರಕ್ಷಣಾ ಸಾಮಗ್ರಿಗಳ ಜಂಟಿ ಉತ್ಪಾದನೆ
 
ಎರಡೂ ದೇಶಗಳ ನಡುವಿನ 6 ಲಕ್ಷ ಕೋಟಿ ವಾಣಿಜ್ಯ ವಹಿವಾಟನ್ನು ಮತ್ತಷ್ಟು ಹೆಚ್ಚಿಸುವುದು
 
ಏಶ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಭದ್ರತೆ, ರಾಜತಾಂತ್ರಿಕ ಸಂಬಂಧ ವೃದ್ಧಿ
 
ಚಾಯ್‌ಪೇ ಚರ್ಚಾ
 
ಚುನಾವಣೆ ವೇಳೆ ಚಾಯ್‌ ಪೇ ಚರ್ಚಾ ಕಾರ್ಯಕ್ರಮ ನಡೆಸಿ ಜನಪ್ರಿಯ ರಾಗಿದ್ದ ಮೋದಿಯವರು ರವಿವಾರ ಒಬಾಮಾ ಅವರೊಂದಿಗೂ ಚಾಯ್‌ ಪೇ ಚರ್ಚಾ ನಡೆಸಿ ಗಮನ ಸೆಳೆದರು. ಹೈದರಾಬಾದ್‌ ಹೌಸ್‌ನ ಉದ್ಯಾನದಲ್ಲಿ ವಾಕ್‌ ಆಂಡ್‌ ಟಾಕ್‌ ನಡೆಸಿ ಒಬಾಮಾಗೆ ಮೋದಿ ಟೀ ಮಾಡಿಕೊಟ್ಟರು. 
 
ಒಬಾಮಾ ಊಟಕ್ಕೆ ಮಂಗಳೂರು ಸಿಗಡಿ ಮೀನು, ಗುಜರಾತ್‌ ಖಡಿ ನೀಡಲಾಯಿತು. 
 
ಪರಮಾಣು ಡೀಲ್‌ಗೆ ಇದ್ದ 2 ಅಡ್ಡಿಗಳು
 
1. ದುರಂತದ ಹೊಣೆ ಯಾರು?
 
ಅಣು ಅವಘಡ ಸಂಭವಿಸಿದರೆ, ಅಣು ಇಂಧನ ಪೂರೈಸುವ ಅಮೆರಿಕದ ಕಂಪೆನಿ ಅಥವಾ ಘಟಕವನ್ನು ಸ್ಥಾಪಿಸಿರುವ ಕಂಪೆನಿ ನೇರವಾಗಿ ಬಾಧ್ಯಸ್ಥವಾಗುತ್ತದೆ. ಅವ ಘಡದ ಹೊಣೆ ಹೊತ್ತು ಪರಿಹಾರವನ್ನು ಸಂತ್ರಸ್ತರಿಗೆ ಪಾವತಿಸಬೇಕಾಗುತ್ತದೆ ಎಂದು ಭಾರತ ಷರತ್ತು ಹಾಕಿತ್ತು. ಆದರೆ ಇದಕ್ಕೆ ಒಪ್ಪದ ಅಮೆರಿಕ, ಈ ವಿಚಾರದಲ್ಲಿ ಜಾಗತಿಕ ನಿಯಮಗಳನ್ನು ಭಾರತ ಪಾಲಿಸಬೇಕು. ಭಾರತದ ಈ ಕಠಿನ ಷರತ್ತಿಗೆ ತಾನು ಒಪ್ಪುವುದಿಲ್ಲ ಎಂದಿತ್ತು. 
 
ಅಮೆರಿಕದ ಒತ್ತಾಸೆಗೆ ಮಣಿದ ಭಾರತ
 
2. ಅಣು ಇಂಧನದ ಮೇಲೆ ನಿಗಾ
 
ಅಮೆರಿಕವು ಭಾರತಕ್ಕೆ ಪೂರೈಸುವ ಯುರೇನಿಯಂ, ಪುಟೋನಿಯಂನಂಥ ಅಣು ಇಂಧನದ ಬಳಕೆ ಮೇಲೆ  ನಿಗಾ ಇಡಲು ಮುಂದಾಗಿತ್ತು. ಅಮೆರಿಕದ ಈ ಬೇಡಿಕೆ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತಿತ್ತು. ಹಸ್ತಕ್ಷೇಪ ಮಾಡುವಂತಿತ್ತು. 
 
ಹೀಗಾಗಿ ಭಾರತ ಇದಕ್ಕೆ ಒಪ್ಪದೇ, ಐಎಇಎಗೆ ಮಾತ್ರ ಘಟಕ ಪರಿಶೀಲನೆಗೆ ಅವಕಾಶ ನೀಡುತ್ತೇವೆ ಎಂದಿತ್ತು.
 
ಭಾರತದ ಷರತ್ತಿಗೆ ಓಕೆ ಎಂದ ಅಮೆರಿಕ
 

ವೆಬ್ದುನಿಯಾವನ್ನು ಓದಿ