ಭಾರತವೇ ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ: ನವಾಜ್ ಷರೀಫ್

ಭಾನುವಾರ, 4 ಅಕ್ಟೋಬರ್ 2015 (17:48 IST)
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಬೆಂಬಲ ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
 
ಪಾಕಿಸ್ತಾನದಲ್ಲಿನ ಉಗ್ರರಿಗೆ ಭಾರತ ಬೆಂಬಲ ನೀಡುತ್ತಿದೆ ಎನ್ನುವ ಸಾಕ್ಷ್ಯಾಧಾರಗಳನ್ನು ಇತರೆ ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
 
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಂಡ ನಂತರ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಲಂಡನ್‌ಗೆ ಆಗಮಿಸಿದ್ದಾರೆ. 
 
ಉಗ್ರರಿಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನ ವಿರುದ್ಧದ ಪರೋಕ್ಷ ಯುದ್ಧವನ್ನು ಭಾರತ ನಿಲ್ಲಿಸಬೇಕು. ಇದರಿಂದ ಯಾವ ಗುರಿಯೂ ಸಾಧಿಸಿದಂತಾಗುವುದಿಲ್ಲ. ಉಭಯ ದೇಶಗಳ ನಡುವಣ ಉತ್ತಮ ಬೆಳವಣಿಗೆ ಕೂಡಾ ಅಲ್ಲ ಎಂದು ನವಾಜ್ ಹೇಳಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
 
ನಾವು ಹೇಳಿದಂತೆ ಕೇಳಿದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಮಧ್ಯದ ಸಂಬಂಧದಲ್ಲಿ ಸುಧಾರಣೆಯಾಗಲು ಸಾಧ್ಯ ಎಂದು ಷರೀಫ್ ಹೇಳಿದ್ದಾರೆ.
 
ಭಾರತ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಉಭಯ ದೇಶಗಳ ನಡುವಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಸೂಕ್ತ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ