ಪ್ರತ್ಯೇಕತಾವಾದಿಗಳೊಂದಿಗೆ ಪಾಕ್ ರಾಯಭಾರಿ ಮಾತುಕತೆ: ಹಿಂದು ಸಂಘಟನೆಗಳಿಂದ ಭಾರಿ ಪ್ರತಿಭಟನೆ

ಮಂಗಳವಾರ, 19 ಆಗಸ್ಟ್ 2014 (18:11 IST)
ಗಡಿರೇಖೆಗಳಲ್ಲಿ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗಳು ಮತ್ತು ಪ್ರತ್ಯೇಕತವಾದಿ ನಾಯಕರೊಂದಿಗೆ ಪಾಕ್ ರಾಯಭಾರಿ ನಡೆಸಿದ ಮಾತುಕತೆಯಿಂದ ಆಕ್ರೋಶಗೊಂಡ ಕೇಂದ್ರ ಸರಕಾರ, ಆಗಸ್ಟ್ 25 ರಂದು ನಡೆಯಬೇಕಾಗಿದ್ದ ಸಚಿವ ಮಟ್ಟದ ಸಭೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. 
 
ಕೇಂದ್ರ ಸರಕಾರದ ವಿರೋಧದ ಮಧ್ಯೆಯೂ ಪಾಕ್ ರಾಯಭಾರಿ ಕಾಶ್ಮಿರದ ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಅವರೊಂದಿಗೆ ಮಾತುಕತೆ ನಡೆಸಿರುವುದಲ್ಲದೇ ಮತ್ತೊಬ್ಬ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿರುವುದು ಕೇಂದ್ರದ ಕೆಂಗೆಣ್ಣಿಗೆ ಗುರಿಯಾಗಿತ್ತು. ಉಭಯ ದೇಶಗಳ ಸಂಬಂಧ ಸುಧಾರಿಸುವ ಮೊದಿ ಪ್ರಯತ್ನಕ್ಕೆ ಪಾಕಿಸ್ತಾನ ತಣ್ಣಿರೆರಚುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.
 
ವಿದೇಶಾಂಗ ಇಲಾಖೆಯ ವಕ್ತಾರರಾದ ಸಯ್ಯದ್ ಅಕ್ಬರುದ್ದೀನ್ ಮಾತನಾಡಿ, ಪ್ರತ್ಯೇಕತಾವಾದಿಗಳೊಂದಿಗೆ ಪಾಕ್ ರಾಯಭಾರಿ ಮಾತುಕತೆ ನಡೆಸಿದ್ದರಿಂದ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿದೆ. ಇಂತಹ ಸ್ಥಿತಿಯಲ್ಲಿ ಉಭಯ ಪಕ್ಷಗಳ ನಡುವೆ ಮಾತುಕತೆ ಸೂಕ್ತವಲ್ಲ. ಶಿಮ್ಲಾ ಸಂಧಾನ ಮತ್ತು ಲಾಹೋರ್ ಘೋಷಣಾಪತ್ರದಡಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದಲ್ಲಿ ಮಾತ್ರ ಸಮಸ್ಯೆ ಪರಿಹಾರವಾಗಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.    
 
ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಪಾಕಿಸ್ತಾನ ಮತ್ತು ಅಲ್ಲಿಯ ವಿಚ್ಚಿದ್ರಕಾರಿ ಶಕ್ತಿಗಳಿಗೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಣೆ ಬೇಕಾಗಿಲ್ಲ. ಆದ್ದರಿಂದ ಸಚಿವ ಮಟ್ಟದ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ರಕ್ಷಣಾ ಮಂತ್ರಿ ಅರುಣ್ ಜೇಟ್ಲಿ ತಿಳಿಸಿದ್ದಾರೆ. 
 
ಕಾಶ್ಮಿರದ ಪ್ರತ್ಯೇಕತಾವಾದಿಗಳೊಂದಿಗೆ ಭೇಟಿ ಮಾಡದಂತೆ ಕೇಂದ್ರ ಸರಕಾರ ಪಾಕ್ ರಾಯಭಾರಿಗೆ ಎಚ್ಚರಿಕೆ ನೀಡಿತ್ತು.ಆದರೆ, ಕೇಂದ್ರ ಸರಕಾರದ ಎಚ್ಚರಿಕೆಯ ಮಧ್ಯೆಯೂ ಪಾಕ್ ರಾಯಬಾರಿ ಬಾಸಿತ್ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ರಾಜಧಾನಿಯಲ್ಲಿರುವ ಪಾಕ್ ರಾಯಭಾರಿ ಕಚೇರಿಯ ಮುಂದೆ ಬಾರಿ ಪ್ರತಿಭಟನೆ ನಡೆಸಿದ್ದವು. 

ವೆಬ್ದುನಿಯಾವನ್ನು ಓದಿ