ಭಾರತ ನನ್ನ ಮನೆ, ನನ್ನ ಅಸ್ಥಿ ಈ ಮಣ್ಣಿನಲ್ಲೇ ವಿಲೀನವಾಗಲಿದೆ: ಸೋನಿಯಾ

ಮಂಗಳವಾರ, 10 ಮೇ 2016 (09:21 IST)
ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾ ಇಟಲಿ ಮೂಲದ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿಗೆ ಸೋನಿಯಾ ಗಾಂಧಿ ಖಡಕ್ ತಿರುಗೇಟು ನೀಡಿದ್ದಾರೆ. ನಾನು ಇಂದಿರಾ ಸೊಸೆ, ಇಲ್ಲಿಯೇ ಸಾಯುತ್ತೇನೆ ಎಂದು ಅವರು ಭಾವನಾತ್ಮಕ ಧ್ವನಿಯಲ್ಲಿ ಹೇಳಿದ್ದಾರೆ. 

ತಿರುವನಂತಪುರದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ  ಸೋನಿಯಾ, ‘ನಾನು  ಇಟಲಿಯಲ್ಲಿ ಜನಿಸಿದ್ದು ನಿಜ. ಆದರೆ 1968ರಲ್ಲಿ ನಾನು ಇಂದಿರಾ ಗಾಂಧಿ (ಆಗಿನ ಪ್ರಧಾನಿ) ಸೊಸೆಯಾಗಿ ಭಾರತಕ್ಕೆ ಬಂದೆ. ಇದು ನನ್ನ ಮನೆ ಮತ್ತು ನನ್ನ ದೇಶ. ನಾನು ಇಲ್ಲಿಯೇ ಕೊನೆಯುಸಿರೆಳೆಯುತ್ತೇನೆ. ನನ್ನ ಅಸ್ಥಿಯೂ ಭಾರತದ ಮಣ್ಣಿನಲ್ಲೇ ವಿಲೀನಗೊಳ್ಳುತ್ತದೆ. ಭಾರತದೊಂದಿಗಿನ ನನ್ನ ಬಾಂಧವ್ಯ ಪ್ರಧಾನಿ ಮೋದಿಗೆ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತು’ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
 
ನನ್ನ ಕುಟುಂಬ ಇಟಲಿಯಲ್ಲಿದೆ. 93 ವರ್ಷದ ನನ್ನ ತಾಯಿಯೂ ಇದ್ದಾರೆ. ಈ ಬಗ್ಗೆ ಹೇಳಿಕೊಳ್ಳಲು ನನಗೆ ಹಿಂಜರಿಕೆಯಿಲ್ಲ ಎಂದಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ನನಗೆ ಇಟಲಿಯಲ್ಲಿ ಕುಟುಂಬವಿಲ್ಲ. ನಾನು ಅಲ್ಲಿಗೆ ಹೋಗೇ ಇಲ್ಲ ಎಂದಿದ್ದರು.
 
ಭಾನುವಾರ ಕೇರಳದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಧಾನಿ ಸೋನಿಯಾ ಅವರ ಇಟಲಿ ಮೂಲವನ್ನು ಕೆದಕಿದ್ದರು. ಇದಕ್ಕೆ ತಿರುಗೇಟು ನೀಡಿದ ಸೋನಿಯಾ ತಮ್ಮ ಭಾಷಣ ಅಂತ್ಯಗೊಳಿಸುವ ಮುನ್ನ  ನಾನು ಕೆಲ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ಕಳೆದ 48 ವರ್ಷಗಳಿಂದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮತ್ತು ಇತರ ಕೆಲ ಪಕ್ಷಗಳು ನನ್ನ ಇಟಲಿ ಮೂಲವನ್ನಿಟ್ಟುಕೊಂಡು ನನ್ನನ್ನು ಗುರಿಯಾಗಿಸುತ್ತಿವೆ. ನನ್ನ ತಂದೆ-ತಾಯಿಗಳ ಬಗ್ಗೆ ನನಗೆ ಸದಾ ಅಭಿಮಾನವಿದೆ. ಅವರು ಸದಾ ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದಿದ್ದಾರೆ. ಇಟಲಿಯಲ್ಲಿ ನನಗೆ ಸಂಬಂಧಿಕರಿದ್ದಾರೆ.  93 ವರ್ಷದ ತಾಯಿ ಮತ್ತು ಇಬ್ಬರು ಸಹೋದರಿಯರಿದ್ದಾರೆ. ನನ್ನ ಪ್ರೀತಿಯವರ (ಪತಿ ರಾಜೀವ್ ಗಾಂಧಿ, ಅತ್ತೆ ಇಂದಿರಾ ಗಾಂಧಿ)ರಕ್ತ ಈ ದೇಶದ ಮಣ್ಣಿನಲ್ಲಿ ಮಿಳಿತವಾಗಿದೆ. ಇದು ನನ್ನ ದೇಶ ಕೂಡ. ಇಲ್ಲೆ ಕೊನೆಯುಸಿರೆಳೆಯುತ್ತೇನೆ. ನನ್ನ ಚಿತಾಭಸ್ಮ ನನ್ನ ಪ್ರೀತಿಪಾತ್ರರೊಂದಿಗೆ ಈ ಮಣ್ಣಿನಲ್ಲಿಯೇ ಸೇರಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. 
 
ಸೋಮವಾರ ಸಂಜೆ ಕೇರಳಕ್ಕೆ ಆಗಮಿಸಿದ್ದ ಅವರು ತ್ರಿಶೂರ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ನವದೆಹಲಿಗೆ ಹಿಂತಿರುಗಿದರು.

ವೆಬ್ದುನಿಯಾವನ್ನು ಓದಿ