ಹಿಟ್ ಲಿಸ್ಟ್‌ ವ್ಯಕ್ತಿಗಳ ಹತ್ಯೆಗೆ ವಿಷಯುಕ್ತ ಪತ್ರಗಳ ರವಾನೆ: ಮುಜಾಹಿದ್ದೀನ್ ಹೊಸ ತಂತ್ರ

ಬುಧವಾರ, 20 ಆಗಸ್ಟ್ 2014 (15:52 IST)
ಹಿಟ್ ಲಿಸ್ಟ್‌ನಲ್ಲಿರುವ ವ್ಯಕ್ತಿಗಳನ್ನು ಕೊಲ್ಲಲು, ವಿಷದ ದ್ರಾವಣದಲ್ಲಿ ಅದ್ದಿದ ಪತ್ರಗಳನ್ನು ಕಳುಹಿಸಲು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹುನ್ನಾರ ನಡೆಸುತ್ತಿದೆ ಎಂದು ದೆಹಲಿ ಪೋಲಿಸರು ತಿಳಿಸಿದ್ದಾರೆ. 

ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಸ್ಥಾಪಿಸಿದ್ದ ಉಗ್ರಗಾಮಿ ಸಂಘಟನೆಯೊಂದರ ಆರು ಶಂಕಿತ ವ್ಯಕ್ತಿಗಳ ವಿರುದ್ಧ ಕೋರ್ಟ್‌ನಲ್ಲಿ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಈ ಭೀಕರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. 
 
ಶಂಕಿತ ಇಂಡಿಯನ್ ಮುಜಾಹಿದ್ದೀನ್ ಉಗ್ರರಾದ ತೆಹಸೀನ್ ಅಕ್ತರ್ ಮತ್ತು  ವಕಾರ್ ಅಜರ್ ಅವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ತಮ್ಮಲ್ಲಿ ಲಭ್ಯವಿದ್ದ  ರಾಯಾಯನಿಕಗಳನ್ನು ಬಳಸಿ ( ಮೆಗ್ನೀಸಿಯಮ್ ಸಲ್ಫೇಟ್, ಅಸಿಟೋನ್ ಮತ್ತು ಕ್ಯಾಸ್ಟರ್ ಬೀಜಗಳು ಇತ್ಯಾದಿ)  ವಿಷವನ್ನು ತಯಾರಿಸಲು ಪ್ರಯತ್ನಿಸಿದ್ದೆವು ಎಂಬ ಸ್ಪೋಟಕ ವಿಚಾರವನ್ನು  ಅವರು ಬಾಯ್ಬಿಟ್ಟಿದ್ದಾರೆ ಎಂದು ದೆಹಲಿ ಪೊಲೀಸರ ವಿಶೇಷ ಘಟಕ ತನ್ನ ಪೂರಕ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.   
 
ಈ ಉಗ್ರರು ವಿಷವನ್ನು ತಯಾರಿಸುವುದರ ಹಿಂದಿನ ಉದ್ದೇಶ  ತಾವು ಗುರಿ ಇಟ್ಟಿರುವ ವ್ಯಕ್ತಿಗಳಿಗೆ ವಿಷ ಸೋಂಕಿಸಿದ  ಪತ್ರಗಳನ್ನು ಕಳುಹಿಸಿ ಸಾಯಿಸುವುದಾಗಿತ್ತು. ಆರೋಪಿ ವಕಾರ್ ಬಳಿಯಿದ್ದ  ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ತಮ್ಮ ಪೂರಕ ಚಾರ್ಜ್‌ಶೀಟ್‌ನಲ್ಲಿ  ಪೊಲೀಸರು ಶಂಕಿತ ಇಂಡಿಯನ್ ಮುಜಾಹುದ್ದೀನ್ ಉಗ್ರರಾದ ತೆಹಶೀನ್  ಅಖ್ತರ್, ಜಿಯಾ ಉರ್ ರೆಹಮಾನ್, ಮೊಹಮ್ಮದ್ ವಕಾರ್ ಅಜರ್, ಮೊಹಮ್ಮದ್ ಮರೂಫ್, ಮೊಹಮ್ಮದ್ ಸಾಕೀಬ್ ಅನ್ಸಾರಿ ಮತ್ತು ಇಮ್ತಿಯಾಜ್ ಆಲಂ ಅವರನ್ನು ಹೆಸರಿಸಿದ್ದಾರೆ. ಅವರೆಲ್ಲರೂ ಈಗ ಪೋಲಿಸರ ವಶದಲ್ಲಿದ್ದಾರೆ. 
 
ಅವರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ, ಸ್ಫೋಟಕ ಪದಾರ್ಥ ಅಧಿನಿಯಮ, ಶಸ್ತ್ರ ಅಧಿನಿಯಮ ಮತ್ತು ಐಪಿಸಿ ಅನ್ವಯ ವಿವಿಧ ಅಪರಾಧಗಳಡಿ ಚಾರ್ಜ್‌ಶೀಟ್‌ ದಾಖಲು ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ