ಐಪಿಎಸ್ ಅಧಿಕಾರಿ ನಿಗೂಢ ಸಾವು: ನಿಷ್ಪಕ್ಷಪಾತ ತನಿಖೆಗೆ ಕರುಣಾನಿಧಿ ಒತ್ತಾಯ

ಶನಿವಾರ, 20 ಫೆಬ್ರವರಿ 2016 (11:31 IST)
ಐಪಿಎಸ್ ಅಧಿಕಾರಿ ಹರೀಶ್ ಸಾವಿನ ವಿಚಾರ ಈಗ ತಮಿಳುನಾಡಿನಲ್ಲಿ ರಾಜಕೀಯ ಅಸ್ತ್ರದ ರೂಪ ಪಡೆದುಕೊಂಡಿದೆ. ಯುವ ಅಧಿಕಾರಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. 
 
ಎಐಡಿಎಂಕೆ ಆಡಳಿತದಡಿಯಲ್ಲಿ ಸರ್ಕಾರಿ ಅಧಿಕಾರಿಗಳ ನಿಗೂಢ ಸಾವು ಹೆಚ್ಚೆಚ್ಚು ನಡೆಯುತ್ತಿವೆ ಎಂದು ಕರುಣಾನಿಧಿಯವರು ಆಕ್ರೋಶ ವ್ಯಕ್ತ ಪಡಿಸಿದ್ದು ಹರೀಶ್ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ
 
ಹರೀಶ್ ಶವವಾಗಿ ಪತ್ತೆಯಾದ ಮೆಸ್‍ನಲ್ಲಿ ಏನಾಯಿತು ಎಂಬ ಬಗ್ಗೆ ಹಲವು ಅನುಮಾನಗಳಿವೆ ಎಂದು ಕರುಣಾನಿಧಿ ಹೇಳಿದ್ದಾರೆ. 
 
ಚೆನ್ನೈನಲ್ಲಿ ಭೃಷ್ಟಾಚಾರ ನಿಗ್ರಹ ದಳದ ಎಸ್‌ಪಿಯಾಗಿದ್ದ ಕೋಲಾರ ಜಿಲ್ಲೆಯ ಹರೀಶ್ 2009ನೇ ಐಪಿಎಸ್ ಬ್ಯಾಚ್‍ನ ತಮಿಳುನಾಡು ಕೇಡರ್ ಅಧಿಕಾರಿಯಾಗಿದ್ದರು. ಆದರೆ ಗುರುವಾರ ಚೆನ್ನೈನ ಐಪಿಎಸ್ ಅಧಿಕಾರಿಗಳ ಮೆಸ್‍ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.
 
ಐಪಿಎಸ್ ಅಧಿಕಾರಿ ಹರೀಶ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಒಂದೆಡೆ ವೈಯಕ್ತಿಕ ವಿಚಾರ ಕಾರಣವೆಂದು ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ಒತ್ತಡ, ಬಡ್ತಿ ಸಿಗಲು ವಿಳಂಬವಾಗುತ್ತಿರುವುದರಿಂದ ಖಿನ್ನತೆಗೊಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
 

ವೆಬ್ದುನಿಯಾವನ್ನು ಓದಿ