ನನ್ನನ್ನು ಮನೆಗೆ ಕರೆದೊಯ್ಯಿ: ಐಸಿಸ್‌ ಸೇರಿದ್ದ ಭಾರತೀಯನ ಅಳಲು

ಶನಿವಾರ, 10 ಅಕ್ಟೋಬರ್ 2015 (13:12 IST)
ಕಳೆದ 6 ತಿಂಗಳ ಹಿಂದೆ ಮನೆ ತೊರೆದು ಹೋಗಿ ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ಉತ್ತರ ಪ್ರದೇಶದ ಆಜಂಘಡದ ಯುವಕನೋರ್ವ ಮನೆಗೆ ಹಿಂದಿರುಗಲು ಬಯಸಿದ್ದಾನೆ. ಸಂಘಟನೆಯ ವಿಧ್ವಂಸಕ ಕೃತ್ಯಗಳಿಂದ ಬೇಸತ್ತಿರುವ ಆತ ಇತ್ತೀಚಿಗೆ ತಮ್ಮ ಕುಟುಂಬದವರಿಗೆ ಕರೆ ಮಾಡಿ ಮನೆಗೆ ಹಿಂತಿರುಗಲು  ಸಹಾಯ ಮಾಡಿ ಎಂದು ಅಂಗಲಾಚಿದ್ದಾನೆ ಎಂದು ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ. 
 
ಐಸಿಸ್‌ನಿಂದ ಪ್ರಭಾವಿತನಾಗಿ ಸಿರಿಯಾಕ್ಕೆ ಹೋಗಿದ್ದ ಯುವಕ ಕಳೆದ ಕೆಲ ದಿನಗಳ ಹಿಂದೆ ರಾಕ್ಕಾದಿಂದ ಫೋನ್ ಕರೆ ಮಾಡಿದ್ದು, 'ಐಸಿಸ್‌ ಉಗ್ರರು ನಡೆಯುವ ವಿಧ್ವಂಸಕ ಕೃತ್ಯಗಳು ನನ್ನನ್ನು ಬೆಚ್ಚಿ ಬೀಳಿಸಿವೆ. ನನಗೆ ಸಾವಿನ ಭಯ ಕಾಡುತ್ತಿದ್ದು ದೇಶಕ್ಕೆ ಮರಳಲು ಕಾತರಿಸುತ್ತಿದ್ದೇನೆ', ಎಂದು ಹೇಳಿದ್ದಾನೆ. 
 
ಆತ ಕಳೆದ 6 ತಿಂಗಳಿಂದ ಎಲ್ಲಿದ್ದ ಎನ್ನುವುದು ಗೊತ್ತಿಲ್ಲದ ಕುಟುಂಬ ಈಗ ಆತನ ಕರೆ ಸ್ವೀಕರಿಸಿದ ಮೇಲೆ ಈ ಕುರಿತು ಗುಪ್ತಚರ ದಳಕ್ಕೆ ಮಾಹಿತಿ ನೀಡಿದ್ದಾರೆ. ಆತನ ಆರೋಗ್ಯ  ಬಿಗಡಾಯಿಸಿದೆ ಎಂದು ತಿಳಿದು ಬಂದಿದ್ದು, ಆತನನ್ನು ಮರಳಿ ಕರೆ ತರಲು ಗುಪ್ತಚರ ದಳದ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.
 
12 ನೇ ತರಗತಿಯವರೆಗೆ ಓದಿದ್ದ ಯುವಕ ಸಣ್ಣ ವ್ಯಾಪಾರ ಮಾಡಿಕೊಂಡಿದ್ದ. ಬಳಿಕ ಐಸಿಸ್ ಪ್ರಭಾವಕ್ಕೊಳಗಾಗಿ ಮನೆ ತೊರೆದು ಹೋಗಿದ್ದ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ