ಶಶಿ ತರೂರ್ ಸುನಂದಾಗೆ ವಿಚ್ಛೇದನ ನೀಡಲು ಬಯಸಿದ್ದರೇ?

ಬುಧವಾರ, 23 ಜುಲೈ 2014 (11:18 IST)
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವು ಹೊಸ ತಿರುವು ಪಡೆದುಕೊಂಡಿದೆ. ಪಂಚತಾರಾ ಹೊಟೆಲ್‌ನಲ್ಲಿ ಸುನಂದಾ ಸಾವಿನ ಕಾರಣ ಇನ್ನೂ ನಿಗೂಢವಾಗಿ ಉಳಿದಿರುವ ನಡುವೆ, ಶಶಿ ತರೂರ್ ಸುನಂದಾ ಪುಷ್ಕರ್ ಅವರಿಗೆ ವಿಚ್ಛೇದನ ನೀಡಿ ಪಾಕಿಸ್ತಾನದ ಪತ್ರಕರ್ತೆಯನ್ನು ಮದುವೆಯಾಗಲು ಬಯಸಿದ್ದರು ಎಂದು ಸುದ್ದಿವಾಹಿನಿಯೊಂದು ತಿಳಿಸಿದೆ.
 
 ಪುಷ್ಕರ್ ಸಂಬಂಧಿಗಳು ಮತ್ತು ಸ್ನೇಹಿತರು ತನಿಖೆದಾರರ ಮುಂದೆ ನೀಡಿರುವ ಹೇಳಿಕೆಯನ್ನು ಉದಾಹರಿಸಿ, ಲೋಕಸಭಾ ಚುನಾವಣೆ ಬಳಿಕ ಪತ್ರಕರ್ತೆಯನ್ನು ವಿವಾಹವಾಗಲು ಶಶಿ ತರೂರ್ ಯೋಜಿಸಿದ್ದರು. ಪುಷ್ಕರ್ ಅವರ ಆಪ್ತಸ್ನೇಹಿತೆ ನಳಿನಿ ಸಿಂಗ್ ಮತ್ತು ಮನೆಸೇವಕ ನಾರಾಯಣ್ ಸಿಂಗ್ ಅವರು ಹೇಳುವ ಪ್ರಕಾರ, ಶಶಿ ತರೂರ್ ಇನ್ನೂ ಇತರೆ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಫುಷ್ಕರ್‌ಗೆ ಈ ವಿಷಯ ತಿಳಿದ ಕೂಡಲೇ ಪತಿ-ಪತ್ನಿಯ ನಡುವೆ ಸಂಬಂಧ ಹದಗೆಟ್ಟಿತು.

ಸುನಂದಾ ತೀವ್ರ ಖಿನ್ನತೆ ಮತ್ತು ಆಕ್ರೋಶಕ್ಕೆ ಗುರಿಯಾಗಿದ್ದರು. ತನಿಖೆದಾರರಿಗೆ ನೀಡಿರುವ ಹೇಳಿಕೆಗಳಲ್ಲಿ ತರೂರ್ ಅವರು ದುಬೈನಲ್ಲಿ ಪತ್ರಕರ್ತೆ ತರಾರ್ ಅವರನ್ನು 2013ರ ಜೂನ್‌ನಲ್ಲಿ ಭೇಟಿಯಾಗಿ ಹೊಟೆಲ್ ಕೋಣೆಯೊಂದರಲ್ಲಿ ಮೂರು ದಿನಗಳ ಕಾಲ ಒಟ್ಟಿಗೆ ತಂಗಿದ್ದರು. ಪುಷ್ಕರ್ ಸ್ನೇಹಿತರು ತಮ್ಮ ಹೇಳಿಕೆ ದೃಢೀಕರಿಸಲು ಪೊಲೀಸರಿಗೆ ಸಾಕ್ಷ್ಯಗಳನ್ನು ನೀಡಿದ್ದಾರೆ.

 ತಿರುವನಂತಪುರದಿಂದ ದೆಹಲಿಗೆ ಬರುವ ಫ್ಲೈಟ್‌ನಲ್ಲಿ ಈ ವಿಷಯದ ಬಗ್ಗೆ ಸುನಂದಾ ಮತ್ತು ಶಶಿ ತರೂರ್ ನಡುವೆ ಬಿಸಿ ವಾಗ್ವಾದ ನಡೆಯಿತೆಂದು ತಿಳಿದುಬಂದಿದೆ. ಕಳೆದ ಜನವರಿ 17ರಂದು ದಕ್ಷಿಣ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನ ರೂಂ. ನಂ. 345ರಲ್ಲಿ ಪುಷ್ಕರ್ ಮೃತಪಟ್ಟಿದ್ದರು.  ಅವರ ಪತಿ ತರೂರ್ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ  ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್‌ಗೆ ಟ್ವಿಟರ್‌ನಲ್ಲಿ ಟೀಕೆ ಮಾಡಿದ ಮಾರನೆಯ ದಿನವೇ ಪುಷ್ಕರ್  ನಿಗೂಢವಾಗಿ ಸಾವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ