ಉಗ್ರರ ಜತೆ ವಿವಾಹವಾಗಲು ನಕಾರ: ಗರ್ಭಿಣಿಯರು ಸೇರಿದಂತೆ 150 ಮಹಿಳೆಯರ ಶಿರಚ್ಛೇದ

ಗುರುವಾರ, 18 ಡಿಸೆಂಬರ್ 2014 (15:50 IST)
ಪಾಕಿಸ್ತಾನದ ಸೇನಾ ಶಾಲೆಯಲ್ಲಿ ನಡೆದ ಭೀಕರ ರಕ್ತದೋಕುಳಿಗೆ ಇಡೀ ಜಗತ್ತೆ ಕಂಬನಿ ಮಿಡಿಯುತ್ತಿದ್ದರೆ, ಇನ್ನೊಂದು ಉಗ್ರ ಸಂಘಟನೆ ಮತ್ತದೇ ರೀತಿಯ ಪೈಶಾಚಿಕ ಕೃತ್ಯವೊಂದನ್ನು ನಡೆಸಿದ ವರದಿಯಾಗಿದೆ. 
ತಮ್ಮ ಸಂಘಟನೆಯ ಸದಸ್ಯರನ್ನು ವಿವಾಹವಾಗಲು ನಿರಾಕರಿಸಿದ ಕಾರಣಕ್ಕೆ ಭಯೋತ್ಪಾದಕ ಗುಂಪು ಗರ್ಭಿಣಿಯರನ್ನು ಸೇರಿದಂತೆ 150 ಮಹಿಳೆಯರ ತಲೆಯನ್ನು ಕಡಿದು ಹಾಕಿದ ಭೀಭತ್ಸ ಘಟನೆ ಇರಾಕ್‌ನಲ್ಲಿ ನಡೆದಿದೆ. 
 
ಇರಾಕ್‌ನ ಮಾನವ ಹಕ್ಕುಗಳ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಪಶ್ಚಿಮ ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿದ ಇಸ್ಲಾಮಿಕ್ ರಾಜ್ಯ ಭಯೋತ್ಪಾದಕ ಸಂಘಟನೆಯವರು 150 ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಗೈದು ನಂತರ ಅವರನ್ನು ಸಾಮೂಹಿಕವಾಗಿ ಸಮಾಧಿ ಮಾಡಿದ್ದಾರೆ . 
 
"ತಮ್ಮ ಸಂಘಟನೆಯ ಸದಸ್ಯರನ್ನು ಮದುವೆಯಾಗಲು ನಿರಾಕರಿಸಿದರು ಎಂಬ ಕಾರಣಕ್ಕೆ ಕ್ರೋಧಿತರಾದ ಉಗ್ರರು, ಗರ್ಭಿಣಿ ಮಹಿಳೆಯರು ಸೇರಿದಂತೆ ಕನಿಷ್ಠ 150 ಮಹಿಳೆಯರ ಶಿರಚ್ಛೇದ ಮಾಡಿದ್ದಾರೆ ," ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
 
ಕಳೆದ ತಿಂಗಳು ರಾಸ್ ಅಲ್ ಮಾ ಎಂಬ ಹಳ್ಳಿಯ ಬುಡಕಟ್ಟು ಸಮುದಾಯದವರ ಮೇಲೆ ದಾಳಿ ನಡೆಸಿದ್ದ ಉಗ್ರರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 50 ಜನರನ್ನು ಹತ್ಯೆ ಮಾಡಿದ್ದರು. 
 
ವರದಿಗಳ ಪ್ರಕಾರ ಎಲ್ಲರನ್ನು ಸಾಲಾಗಿ ನಿಲ್ಲಿಸಿದ ಉಗ್ರರು ಸಾರ್ವಜನಿಕರ ಸಮ್ಮುಖದಲ್ಲಿ ಗುಂಡು ಹಾರಿಸಿದ್ದರು. 

ವೆಬ್ದುನಿಯಾವನ್ನು ಓದಿ